ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ತುಂತುರು ಮಳೆ ಸುರಿಯುತ್ತಿದೆ. ಕಳೆದ ಬಾರಿ ಸುರಿದ ರಣಭೀಕರ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿತ್ತು. ಪರಿಣಾಮ ಈಗ ಸಣ್ಣದಾಗಿ ಮಳೆ ಸುರಿದ್ರೂ ಜನರು ಆತಂಕಪಡುತ್ತಿದ್ದಾರೆ. ಇದೇ 20ರಿಂದ ಪುನಃ ನಿರಂತರ ಮಳೆ ಬೀಳುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳ ಜನರಿಗೆ ಮಡಿಕೇರಿ ನಗರಸಭೆ ನೋಟಿಸ್ ನೀಡಿದೆ. ಇದು ಜನರಲ್ಲಿ ಮತ್ತೆ ಆತಂಕ ಮೂಡುವಂತೆ ಮಾಡಿದೆ.
ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಇಲ್ಲದಿದ್ದರೂ ಶಾಂತಾವಾಗಿಯೇ ಬಿಟ್ಟು ಬಿಟ್ಟು ಸುರಿಯುತ್ತಲೇ ಇದ್ದಾನೆ. ಕಳೆದ ಬಾರಿ ಭೂ ಕುಸಿತವುಂಟಾಗಿದ್ದ ಪ್ರದೇಶಗಳ ಜನರು ಸ್ವಲ್ಪವೇ ಜೋರಾಗಿ ಮಳೆ ಬಿದ್ದರೂ ಆತಂಕಪಡುವಂತಾಗಿದ್ದು, ಜೀವ ಕೈಯಲ್ಲಿಯೇ ಹಿಡಿದು ಬದುಕುತ್ತಿದ್ದಾರೆ.ಇದೇ 20ರಿಂದ ಪ್ರತಿ ವರ್ಷದಂತೆ ಮಾನ್ಸೂನ್ ಮಳೆ ಬೀಳಲಿದ್ದು, ಅಪಾಯದ ಸ್ಥಿತಿಯಲ್ಲಿರುವ ಪ್ರದೇಶಗಳಲ್ಲಿ ಮನೆಗಳ ಖಾಲಿ ಮಾಡುವಂತೆ ಮಡಿಕೇರಿ ನಗರದಲ್ಲೇ ಇರುವ ಚಾಮುಂಡೇಶ್ವರಿ ನಗರ,
ಇಂದಿರಾನಗರ ಮತ್ತು ಮಂಗಳಾದೇವಿ ನಗರಗಳ ಜನರಿಗೆ ನಗರಸಭೆ ನೋಟಿಸ್ ಜಾರಿ ಮಾಡಿದೆ. ಇದು ಈ ಪ್ರದೇಶಗಳ ಜನರನ್ನು ಆತಂಕಕ್ಕೆ ದೂಡಿದ್ದು, ಜೀವ ಬಿಗಿ ಹಿಡಿದು ಬದುಕುತ್ತಿದ್ದಾರೆ.ಕಳೆದ ಬಾರಿ ಭೂಕುಸಿತದಿಂದ ಕೆಲವು ಮನೆಗಳು ಬಿರುಕು ಬಿಟ್ಟಿದ್ದರೆ, ಕೆಲವು ಮನೆಗಳು ವಾಸಿಸಲು ಯೋಗ್ಯವಲ್ಲದ ಸ್ಥಿತಿಯಲ್ಲಿವೆ. 20ರಿಂದ ಮಾನ್ಸೂನ್ ಮಳೆ ಮತ್ತೆ ಜೋರಾಗುವ ಸಾಧ್ಯತೆ ಇರುವುದರಿಂದ ಯಾವುದೇ ಅಪಾಯ ಎದುರಾಗದಂತೆ ಮುನ್ನೇಚ್ಚರಿಕೆ ಕ್ರಮವಾಗಿ ನೋಟಿಸ್ ನೀಡಿದ್ದೇವೆ ಅಷ್ಟೇ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ.
ಆದರೆ ನಮಗೆ ಯಾವುದೇ ಪೂರ್ವ ವ್ಯವಸ್ಥೆ ಮಾಡಿಕೊಡದೆ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. ನಾವು ಮನೆಗಳನ್ನು ಖಾಲಿ ಮಾಡಿ ಎಲ್ಲಿಗೆ ಹೋಗೋದು, ಮನೆಗಳು ಬಾಡಿಗೆಗೆ ಸಿಗುತ್ತಿಲ್ಲ, ಸಿಕ್ಕರೂ ಅತ್ಯಂತ ದುಬಾರಿ ಬಾಡಿಗೆ ಇದೆ. ನಾವು ಇಲ್ಲಿಯೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಸಾಧ್ಯವಾದರೆ ಮತ್ತೆ ಪರಿಹಾರ ಕೇಂದ್ರಗಳನ್ನು ತೆರೆದು ರಕ್ಷಣೆ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.