ಸುದ್ದಿ

ಕೇವಲ 13 ವಯಸ್ಸಿನಲ್ಲೆ 135 ಪುಸ್ತಕ ಬರೆದು 4 ವಿಶ್ವದಾಖಲೆ ನಿರ್ಮಿಸಿದ ಪೋರ…..!

By admin

July 10, 2019

ಉತ್ತರ ಪ್ರದೇಶದ 13 ವರ್ಷದ ಬಾಲಕನೊಬ್ಬ ಧರ್ಮ ಹಾಗೂ ಗಣ್ಯರ ಜೀವನಚರಿತ್ರೆ ಕುರಿತು ಸುಮಾರು 135 ಪುಸ್ತಕಗಳನ್ನು ಬರೆದು, 4 ವಿಶ್ವದಾಖಲೆಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೈದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಈ ಅಪರೂಪದ ಸಾಧನೆಗೈದ ಬಾಲಕನ ಹೆಸರು ಮೃಗೇಂದ್ರ ರಾಜ್. ಈತ ತನ್ನ 6ನೇ ವಯಸ್ಸಿನಲ್ಲೇ ಪುಸ್ತಕ ಬರೆಯುವ ಹವ್ಯಾಸ ಆರಂಭಿಸಿದ್ದ ಈತ ಮೊದಲು ಕವನ ಸಂಕಲನವನ್ನು ಬರೆದಿದ್ದನು. ಆ ನಂತರ ಕಾಲ ಕಳೆಯುತ್ತಿದ್ದಂತೆ ಬಾಲಕನ ಜೊತೆ ಆತನ ಪುಸ್ತಕ ಬರೆಯುವ ಆಸಕ್ತಿ ಕೂಡ ಹೆಚ್ಚಾಗುತ್ತಾ ಬಂತು. ಈವರೆಗೆ ಮೃಗೇಂದ್ರ ಬರೋಬ್ಬರಿ 135 ಪುಸ್ತಕಗಳನ್ನು ಬರೆದಿದ್ದಾನೆ. `ಆಜ್ ಕಾ ಅಭಿಮನ್ಯು’ ಎಂಬ ಕಾವ್ಯನಾಮದಲ್ಲಿ ಮೃಗೇಂದ್ರ ಪುಸ್ತಕಗಳನ್ನು ಬರೆಯುತ್ತಿದ್ದಾನೆ.

ಮೃಗೇಂದ್ರನ ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತಮ್ಮ ಮಗ ಪುಸ್ತಕಗಳನ್ನು ಬರೆಯುವ ಬಗ್ಗೆ ತೋರಿಸುತ್ತಿದ್ದ ಆಸಕ್ತಿಯನ್ನು ಗುರುತಿಸಿ ಆತನನ್ನು ಬೆಂಬಲಿಸಿದ್ದಾರೆ. ಜೊತೆಗೆ ಆತನ ತಂದೆ ರಾಜ್ಯ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.ಈ ಬಗ್ಗೆ ಮಾತನಾಡಿದ ಬಾಲಕ, ನಾನು ರಾಮಾಯಣದಲ್ಲಿರುವ 51 ಪಾತ್ರಗಳ ಬಗ್ಗೆ ವಿಶ್ಲೇಷಿಸಿ ಪುಸ್ತಕಗಳನ್ನು ಬರೆದಿದ್ದೇನೆ. ನಾನು ಬರೆದ ಎಲ್ಲಾ ಪುಸ್ತಕಗಳು 25 ರಿಂದ 100 ಪುಟಗಳನ್ನು ಹೊಂದಿದೆ. ನನ್ನ ಈ ಪ್ರತಿಭೆಯನ್ನು ಮೆಚ್ಚಿ ಡಾಕ್ಟರೇಟ್ ಪದವಿ ನೀಡುವುದಾಗಿ ಲಂಡನ್ ವರ್ಲ್ಡ್ ಯೂನಿವರ್ಸಿಟಿ ಆಫ್ ರೆಕಾರ್ಡ್ಸ್ ಆಫರ್ ನೀಡಿತ್ತು ಎಂದು ತಿಳಿಸಿದ್ದಾನೆ.

ದೊಡ್ಡವನಾದ ಮೇಲೆ ನಾನು ಬರಹಗಾರನಾಗಲು ಇಷ್ಟಪಡುತ್ತೇನೆ. ವಿವಿಧ ವಿಷಯಗಳ ಬಗ್ಗೆ, ಬೇರೆ ಬೇರೆ ಆಯಾಮದಲ್ಲಿ ಇನ್ನೂ ಹಲವಾರು ಪುಸ್ತಕಗಳನ್ನು ಬರೆಯಲು ಬಯಸುತ್ತೇನೆ ಎಂದಿದ್ದಾನೆ.ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯನಾಥ್ ಸೇರಿದಂತೆ ಹಲವು ಗಣ್ಯರ ಬಗ್ಗೆ ಈ ಪೋರ ಪುಸ್ತಕ ಬರೆದಿದ್ದು, ಚಿಕ್ಕವಯಸ್ಸಿನಲ್ಲೇ ಈ ಮಟ್ಟಿಗೆ ಸಾಧನೆ ಮಾಡಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.