ಈಗಾಗಲೇ ನಮಗೆಲ್ಲರಿಗೂ ತಿಳಿದಿರುವ ವಿಷಯವೂ ಕರಾವಳಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರ್ಗಿಲ್ ಮೀನಿನ ಕಾಟವು ಮುಂದುವರೆದಿದೆ ಇದರಿಂದ ಮಂಗಳೂರಿನ ಕಡಲ ತೀರದಲ್ಲಿ ಕಂಡಿದ್ದ ಕಾರ್ಗಿಲ್ ಮೀನುಗಳು, ಕಳೆದೊಂದು ವಾರದಿಂದ ಗಂಗೊಳ್ಳಿ ಮೀನುಗಾರರಿಗೂ ಬಾಧಿಸಿದ್ದು, ಈ ಭಾಗದ ಮೀನುಗಾರರಲ್ಲಿ ಆತಂಕ ಉಂಟು ಮಾಡಿದೆ. ಗಂಗೊಳ್ಳಿ ಬಂದರಿಗೂ ಕಾರ್ಗಿಲ್ ಮೀನುಗಳು ವ್ಯಾಪಿಸುತ್ತಿವೆ. ಹೀಗಾಗಿ, ಮೀನುಗಾರರು ಕಾರ್ಗಿಲ್ ಮೀನುಗಳನ್ನು ಬೇರ್ಪಡಿಸುವಲ್ಲಿ ತೊಡಗಿಕೊಂಡಿದ್ದು, ಬಂಗುಡೆ, ಬೂತಾಯಿ ಹಾಗೂ ಇತರೆ ಮೀನುಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡಿದೆ.
ಲಕ್ಷದ್ವೀಪ, ಹವಳದ ದಿಬ್ಬಗಳಲ್ಲಿ ಹೆಚ್ಚು ವಾಸಿಸುವ ಈ ಮೀನುಗಳು ಎಲ್ಲೆಡೆ ವ್ಯಾಪಿಸುತ್ತಿದ್ದು, ಅತ್ಯಂತ ವಿಷಕಾರಿಯಾಗಿವೆ ಎಂದು ತಿಳಿದುಬಂದಿದೆ . ಈ ಮೀನುಗಳು ಇರುವ ಪ್ರದೇಶಗಳಲ್ಲಿ ಇತರೆ ಮೀನುಗಳು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಮೀನಿನ ಕ್ಷಾಮ ಎದುರಾಗುತ್ತಿದೆ ಎಂದು ಮೀನುಗಾರರು ತಮ್ಮ ಆತಂಕ ವನ್ನು ವ್ಯಕ್ತಪಡಿಸಿದ್ದಾರೆ.
ಮೀನುಗಾರಿಕೆಗೆ ಹೊರಟ ಮೀನುಗಾರರಿಗೆ ಕಳೆದ ಒಂದು ವಾರದಿಂದ ಕೇವಲ ಕಾರ್ಗಿಲ್ ಮೀನುಗಳು ಸಿಗುತ್ತಿದ್ದು, ಇತರೆ ಮೀನುಗಳ ಸಂಗ್ರಹವಾಗುತ್ತಿಲ್ಲ. ಹೀಗಾಗಿ ಕಳೆದೊಂದು ವಾರದಿಂದ ಆರ್ಥಿಕವಾಗಿ ತುಂಬಾ ನಷ್ಟವನ್ನು ಅನುಭವಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ . ಸಾವಿರಾರು ರೂಗಳ . ಇಂಧನ ವ್ಯಯಿಸಿ ಮೀನುಗಾರಿಕೆಗೆ ತೆರಳಿ ಬರಿಗೈಯಲ್ಲಿ ಹಿಂದಿರುಗುವಂತಾಗಿದೆ ಎಂದು ಮೀನುಗಾರರು ಪ್ರತಿಕ್ರಿಯಿಸಿದ್ದಾರೆ.
ಅರಬ್ಬೀ ಸಮುದ್ರದಲ್ಲಿ ಈ ಬಾರಿ ಗಾಳಿಯ ರಭಸ ತುಂಬಾ ಹೆಚ್ಚಾಗಿದ್ದು, ಗಾಳಿಯ ಚಲನೆ ಅತಿ ವೇಗವಾಗಿದೆ. ಹೀಗಾಗಿ ಲಕ್ಷದ್ವೀಪಗಳಲ್ಲಿ ಇರುವ ಕಾರ್ಗಿಲ್ ಮೀನುಗಳು ಉತ್ತರ ದಿಕ್ಕಿನತ್ತ ಚಲಿಸುತ್ತಿದ್ದು, ಈ ಮೀನುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿವೆ. ಮೊದಲೇ ಮೀನಿನ ಕ್ಷಾಮದಿಂದ ಭಯಭೀತರಾಗಿರುವ ಮೀನುಗಾರರು ಮತ್ತಷ್ಟು ಚಿಂತಾಕ್ರಾಂತರಾಗಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.