ರಾಜ್ಯದ ಮೂಲೆ ಮೂಲೆಗಳಲ್ಲೂ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ ಸಂಗ್ರಾಮದ ಮಾದರಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಸಂಘಟನೆ ಚಟುವಟಿಕೆಗಳು ನಡೆಯುತ್ತಿದ್ದು, ಡಿಸಂಬರ್.19 ರಂದು ಕೂಡಲ ಸಂಗಮದಲ್ಲಿ ನಡೆಯುವ ಐತಿಹಾಸಿಕ ಸಮಾವೇಶವು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕ್ರಾಂತಿ ಆಗಲಿದೆಯೆಂದು ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಡಿ.19 ರಂದು ಕೂಡಲ ಸಂಗಮದಲ್ಲಿ ನಡೆಯಲಿರುವ ನಮ್ಮ ಕಾಂಗ್ರೆಸ್ ಐತಿಹಾಸಿಕ ಸಮಾವೇಶಕ್ಕೆ ಪೂರ್ವಭಾವಿ ಪ್ರಚಾರಕ್ಕಾಗಿ ಉತ್ತರ ಕರ್ನಾಟಕದ ತಮ್ಮ ಅಭಿಮಾನಿ ಬೆಂಬಲಿಗರು ಸ್ವಯಂ ಪ್ರೇರಣೆಯಿಂದ ಕಾರುಗಳನ್ನು ತಂದಿದ್ದು, ಇಂದಿನಿಂದ ರಾಜ್ಯದೆಲ್ಲೆಡೆ ಈ ಕಾರುಗಳು ಪ್ರವಾಸ ನಡೆಸಿ ಕೂಡಲಸಂಗಮ ಸಮಾವೇಶಕ್ಕೆ ನಾಲ್ಕರಿಂದ ಐದು ಲಕ್ಷ ಮಂದಿಯನ್ನು ಸೇರಿಸುವ ಕೆಲಸ ಮಾಡಲಿದ್ದಾರೆಂದು ವಿವರಿಸಿದರು.
ನಮ್ಮ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ಕೆ ಶಕ್ತಿ ಕೊಟ್ಟಿರುವ ಉತ್ತರ ಕರ್ನಾಟಕದ ಅಭಿಮಾನಿ ಬೆಂಬಲಿಗರಿಗೆ ತಾವು ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದ ಅವರು, ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರಹಸ್ಯ ಅಜೆಂಡಾ ಇಲ್ಲ, ಬಡವರು, ದೀನ ದಲಿತರು ಹಾಗೂ ಅಹಿಂದ ವರ್ಗದವರು, ಶೋಷಿತರ ಪಕ್ಷವಾಗಿದೆ. ಪಕ್ಷದ ಪ್ರಚಾರ ಕಾರ್ಯಕ್ಕೆ ತಾವು ಯಾವುದೇ ಹಣಕಾಸು ನೆರವು ನೀಡಿಲ್ಲ, ಅಭಿಮಾನಿ ಬೆಂಬಲಿಗರೇ ಸ್ವಯಂ ಪ್ರೇರಿತವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆಂದು ಹೇಳಿದರು.
ನಮ್ಮ ಕಾಂಗ್ರೆಸ್ಪ ಕ್ಷವು ಒಂದು ಸಮಾಜದ ಪಕ್ಷವಲ್ಲವೆಂದು ಸ್ಪಷ್ಟಪಡಿಸಿದ ಅವರು, ಸಾಮಾಜಿಕ ನ್ಯಾಯ ಸ್ಥಾಪನೆಗಾಗಿ, ಬಡವರ ಕಲ್ಯಾಣಕ್ಕಾಗಿ ಎಲ್ಲಾ ವರ್ಗದವರ ಪಕ್ಷವಾಗಿ ನಮ್ಮ ಕಾಂಗ್ರೆಸ್ಅ ನ್ನು ರೂಪಿಸಲಾಗುತ್ತಿದೆ, ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ನೊಂದಿರುವ ಅನೇಕ ಮುಖಂಡರು ನಮ್ಮ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಬಹಳಷ್ಟು ಮುಖಂಡರು ಪಕ್ಷದ ಸಂಪರ್ಕದಲ್ಲಿದ್ದಾರೆಂದು ಅವರು ಮಾರ್ಮಿಕವಾಗಿ ನುಡಿದರು.
ಡಿ.19 ರ ಕೂಡಲಸಂಗಮದಲ್ಲಿ ಪಕ್ಷವನ್ನು ಅಧಿಕೃತವಾಗಿ ಉದ್ಘಾಟಿಸಿದ ನಂತರ ಕರ್ನಾಟಕದ ಯಾವ ಯಾವ ಕ್ಷೇತ್ರಗಳಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಬೇಕೆಂಬುದನ್ನು ನಿರ್ಧರಿಸಲಾಗುವುದು, ತಮ್ಮ ಬೆಂಬಲಿಗರಿರುವ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸಲಾಗುತ್ತದೆಯೆಂದು ಸುಳಿವು ನೀಡಿದರು.
ಇದೇ ಸಂದರ್ಭದಲ್ಲಿ ಪಕ್ಷದ ಧ್ವಜವನ್ನು ಬಿಡುಗಡೆ ಮಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಕಾರುಗಳ ಪ್ರಚಾರ ಕಾರ್ಯಕ್ಕೆ ಪಕ್ಷದ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.