ಜಗತ್ತಿನಲ್ಲೇ ಅತ್ಯಂತ ವೇಗದ ಸಂಚಾರ ವ್ಯವಸ್ಥೆ ಎಂದೇ ಪರಿಚಿತವಾಗಿರುವ ವರ್ಜಿನ್ ಹೈಪರ್‌ಲೂಪ್ ಕಂಪನಿ ಜತೆಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಟೆಕ್ ಸಮ್ಮಿಟ್‌ನಲ್ಲಿ ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ವರ್ಜಿನ್ ಹೈಪರ್‌ಲೂಪ್ ಒನ್ ಜತೆ ಒಡಂಬಡಿಕೆಗೆ ಸಹಿ ಮಾಡಿದ್ದಾರೆ.
ಈ ಒಪ್ಪಂದದ ಪ್ರಕಾರ, ಬೆಂಗಳೂರು, ತುಮಕೂರು, ಹುಬ್ಬಳ್ಳಿ-ಧಾರವಾಡ ಮತ್ತು ಹೊಸೂರುಗಳಲ್ಲಿ ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಪರಿಶೋಧನೆ ಮಾಡುವುದಲ್ಲದೇ, ಆರ್ಥಿಕವಾಗಿಯೂ ಇದು ಪ್ರಯೋಜನಕ್ಕೆ ತರುತ್ತದೆಯೇ ಎಂಬ ಬಗ್ಗೆಯೂ ಅಧ್ಯಯನ ನಡೆಸಲಿದೆ.
ಒಂದೊಮ್ಮೆ ಈ ಯೋಜನೆ ಜಾರಿಯಾಗಲು ಅರ್ಹವೆಂದು ಕಂಡುಬಂದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ವೇಗ ಕೇವಲ ಅರ್ಧಗಂಟೆಗೆ ಇಳಿಯಲಿದೆ. ಅಂದರೆ, ವಿಮಾನ ಪ್ರಯಾಣಕ್ಕಿಂತಲೂ ಕಡಿಮೆ ಸಮಯದಲ್ಲಿ ಈ ನಗರಗಳ ನಡುವೆ ಸಂಚಾರ ಮಾಡಬಹುದಾಗಿದೆ.
ಒಪ್ಪಂದದ ನಂತರ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, “”ಬೆಂಗಳೂರು ಐಟಿ ಹಬ್ ಆಗಿದ್ದು, ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಜಗತ್ತಿನ ಅತ್ಯಂತ ಪ್ರಮುಖ ಐಟಿ ಕಂಪನಿಗಳು ಕಾರ್ಯಾಚರಣೆ ನಡೆಸುತ್ತಿವೆ. ಒಂದು ವೇಳೆ ಹೈಪರ್‌ಲೂಪ್‌ನಂಥ ನವ ತಂತ್ರಜ್ಞಾನವನ್ನು ರಾಜ್ಯದಲ್ಲಿ ಅಳವಡಿಸಿದ್ದೇ ಆದರೆ, ಕರ್ನಾಟಕದ ಪ್ರಗತಿಯ ವೇಗ ಮತ್ತಷ್ಟು ಹೆಚ್ಚುತ್ತದೆ,” ಎಂದಿದ್ದಾರೆ.
ಹೈಪರ್‌ಲೂಪ್ ಯೋಜನೆಗಾಗಿ ಕೇವಲ ಕರ್ನಾಟಕವಷ್ಟೇ ಅಲ್ಲ, ಮಹಾರಾಷ್ಟ್ರ, ಆಂಧ್ರ ಪ್ರದೇಶ ರಾಜ್ಯಗಳೂ ವರ್ಜಿನ್ ಹೈಪರ್‌ಲೂಪ್ ಒನ್ ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡಿವೆ. ಈ ಕಂಪನಿ ಪ್ರಾಥಮಿಕವಾಗಿ ಸ್ಥಳ ಮತ್ತು ಯೋಜನೆಯ ಅಗತ್ಯತೆ ಬಗ್ಗೆ ಅಧ್ಯಯನ ನಡೆಸಲಿದೆ.
ಏನಿದು ಹೈಪರ್‌ಲೂಪ್? ವಿಶೇಷವಾಗಿ ನಿರ್ಮಿಸಲಾದ ಕೊಳವೆಯೊಂದರಲ್ಲಿ ಪಾಡ್(ಪುಟ್ಟ ವಾಹನಗಳು)ಗಳು ಸಾಗುವಂತೆ ಮಾಡುವುದು. ಈ ಕೊಳವೆಯನ್ನು ನೆಲದಿಂದ ಕೊಂಚ ಮೇಲೆಯೇ ನಿರ್ಮಿಸಲಾಗಿರುತ್ತದೆ. ಅಯಸ್ಕಾಂತೀಯ ಗುಣದೊಂದಿಗೆ ಈ ಕೊಳವೆಯ ಯಾವುದೇ ಬದಿಗೂ ಪಾಡ್ ತಗುಲದಂತೆ ಮಾಡಲಾಗುತ್ತದೆ.
ಇನ್ನೂ ವಿಶೇಷವೆಂದರೆ, ಈ ಕೊಳವೆಗೆ ಹೊರಗಿನಿಂದ ಗಾಳಿ ಹೋಗದಂತೆ ನಿರ್ಮಿಸಲಾಗುತ್ತದೆ. ಅಲ್ಲದೆ, ಇದೇ ಕಾಂತೀಯ ಶಕ್ತಿಯಿಂದಲೇ ಇದನ್ನು ಚಲಿಸುವಂತೆ ಮಾಡಲಾಗುತ್ತದೆ. ಆರಂಭದಲ್ಲಿ ಗಂಟೆಗೆ 640 ಕಿ.ಮೀ. ವೇಗ ಎಂದು ಹೇಳಲಾಗಿತ್ತಾದರೂ, ಇದೀಗ ಪ್ರಯೋಗ ಯಶಸ್ವಿಯಾದ ಬಳಿಕ ಗಂಟೆಗೆ ಒಂದು ಸಾವಿರ ಕಿ.ಮೀ. ವೇಗವಾಗಿ ಹೋಗಬಹುದು ಎಂದು ಹೇಳಲಾಗುತ್ತಿದೆ.
ಎಲ್ಲೆಲ್ಲಿ ಯೋಜನೆ ?
ಅಮೆರಿಕ, ಬ್ರಿಟನ್, ಕೆನಡಾ, ಯುಎಇ, ಫಿನ್ಲಂಡ್ ಮತ್ತು ಭಾರತ. ಭಾರತದಲ್ಲಿ ಬೆಂಗಳೂರು, ತುಮಕೂರು, ಹೊಸೂರು, ಹುಬ್ಬಳ್ಳಿ, ಮುಂಬೈ, ಪುಣೆ ನಗರಗಳಲ್ಲಿ ಯೋಜನೆ.