KSRTC

ಕಂಡಕ್ಟರಿಲ್ಲದ KSRTC BUS – ಎಲ್ಲಿ ಹೋದ ಕಂಡಕ್ಟರ್

By admin

May 29, 2022

ಕಂಡಕ್ಟರಿಲ್ಲದ ಕೆಎಸ್ಆರ್ಟಿಸಿ bus

ವಿರಾಜಪೇಟೆಯಿಂದ ಮೈಸೂರಿಗೆ ಪ್ರಯಾಣ ಹೊರಟೆ. ಸುಖಕರ ಹಾಗು ಸುರಕ್ಷಿತ ಪ್ರಯಾಣಕ್ಕೆ KSRTC ಬೆಸ್ಟ್. ಅಂದ ಮಾತ್ರಕ್ಕೆ ಬಸ್ ಹತ್ತಿ ಕಿಟಕಿಯ ಆಸನವನ್ನೇ ಆರಿಸಿ ಕುಳಿತುಕೊಂಡೆ. ನಾಲ್ಕೈದು ನಿಮಿಷದ ನಿಲುಗಡೆಯ ನಂತರ ಚಾಲಕ ಬಸ್ ಚಲಾಯಿಸಿದ. ಸಾಮಾನ್ಯವಾಗಿ ಬಸ್ ತಲುಪಿಸುವುದು ಚಾಲಕನಾದರೂ ಪ್ರಯಾಣಿಕರನ್ನು ನಿಭಾಯಿಸುವುದು ನಿರ್ವಾಹಕರು ತಾನೆ? ಅದೆ ನಮ್ಮ ಕಂಡಕ್ಟರ್.

ಬಸ್ 500 ಮೀಟರ್ ಮುಂದೆ ತಲುಪಿತು. ಪ್ರಯಾಣಿಕರೆಲ್ಲರೂ ಮೊಬೈಲ್, ಮಾತುಕತೆಗಳಲ್ಲಿ ನಿರತರಾಗಿದ್ದಾರೆ. ಆಸನಗಳು ಭರ್ತಿಯಾದ ಬಸ್ಸಿನಲ್ಲಿ ಕಂಡಕ್ಟರ್ ಇಲ್ಲವೆಂದು ಯಾರಿಗೂ ಭಾಸವಾಗಲಿಲ್ಲ. ಸಾರ್ ಕಂಡಕ್ಟರ್ ಇಲ್ಲ ಎಂದು ಯುವಕನೊಬ್ಬ ಕೇಕೆ ಹಾಕಿದ. ಕೇಕೆ ಚಾಲಕನ ಕಿವಿಗೆ ಕೇಳದಿದ್ದರೂ ಕೇಳಿದ ಪ್ರಯಾಣಿಕರೆಲ್ಲರೂ ದಬ್ಬಿಬ್ಬಾಗಿ ಪರಸ್ಪರ ಮುಖ ನೋಡಿ ನಗು ಶುರುಮಾಡಿದರು. ಚಾಲಕನಿಗೆ ವಿಷಯದ ಪರಿವೇ ಇಲ್ಲ. ಪಟ್ಟಣದಲ್ಲಿ ವಾಹನಗಳ‌ ದಟ್ಟಣೆ ಇರುವುದರಿಂದ ನಿಧಾನವಾಗಿ ಚಲಾಯುಸುತ್ತಿದ್ದಾನೆ. ಎಲ್ಲಿಯಾದರೂ ಸ್ಟೋಪ್ ಮಾಡಬೇಕಾದರೆ ಕಂಡಕ್ಟರ್ ನ ಪೀಪಿಯ ಪೀ….. ಶಬ್ಧ ಕೇಳಬೇಕಲ್ಲವೇ..!?

ಹಿಂದಿನಿಂದ ಬಂದ ಯುವಕನೊಬ್ಬ ಚಾಲಕನ ಬಳಿ ತೆರಳಿ ಕಂಡಕ್ಟರ್ ಇಲ್ಲ ಎಂದು ಜೋರಾಗಿ ಕೂಗಿದ. ತಟ್ಟನೆ ಹಿಂದೆ ತಿರುಗಿದೆ ಚಾಲಕ ನಗುತ್ತಾ ಬಸ್ ಬದಿಗೆ ನಿಲ್ಲಿಸಿದ. ಕತ್ತು ತಿರುಗಿಸಿ ಪ್ರಯಾಣಿಕರೊಂದಿಗೆ ಎಲ್ಲಿ ಹೋದ ಇವ ? ಎಂದು ಕೇಳಿದ. ಹ್ನೇ…. ಕಾಲ್ ಮಾಡಿ ನೋಡು ಎಂದರು ಪ್ರಯಾಣಿಕರು. ನನ್ನತ್ರ ನಂಬರ್ ಇಲ್ಲ ಎಂದ. ಕೇಳಿದ ಪ್ರಯಾಣಿಕರಿಗೆ ಇದೇನೋ ಹಾಸ್ಯ ನಾಟಕದಂತೆ. ಹಾಗಾದ್ರೆ ಸ್ವಲ್ಪ ವೈಟ್ ಮಾಡಿ ಕಂಡಕ್ಟರ್ ಈಕಡೆ ಕಾಲ್ ಮಾಡ್ತಾನೆ ಎಂದರು ಪ್ರಯಾಣಿಕರು. ಇಲ್ಲ ಅವನತ್ರ ನನ್ನ ನಂಬರೂ ಇಲ್ಲಾರೀ ಎಂದನು ಚಾಲಕ. ನಾವಿಬ್ಬರೂ ಈ ಬಸ್ಸಲ್ಲಿ ಹೊಸಬರು, ಇವತ್ತು ಬೆಳಿಗ್ಗೆ ನೇಮಕವಾಗಿದ್ದಷ್ಟೆ. ಪರಿಚಯವಾಗಲು ಬಿಡುವು ಸಿಗಲಿಲ್ಲ. ಪ್ರಯಾಣಿಕರಿಗೆ ಟಿಕೆಟ್ ಇಲ್ಲದೆ ಮೈಸೂರು ತಲುಪಬಹುದೆಂಬ ಆಸೆಯೇನೋ ಎಲ್ಲರೂ ಫುಲ್ ಖುಷಿಯಲ್ಲಿ.

ತಕ್ಷಣ ಹಿಂದಿನಿಂದ ಜೋರು ಹಾರ್ನ್ ಶಬ್ದ. ತಿರುಗಿ ನೋಡಿದಾಗ ಅತಿವೇಗದಿಂದ ಬಂದ ಆಟೋದಿಂದ ನಗುತ್ತಾ ಇಳಿದು ಬಸ್ಸತ್ತಿದ ಕಂಡಕ್ಟರ್ ಮಾಮ. ಏನಿದ್ದರೂ ಕಂಡಕ್ಟರ್ ಇಲ್ಲದ KSRTC ಒಡೆಯನಿಲ್ಲದ ಮನೆಯಂತಿತ್ತು.

Shafi Anvaari Kodagarahalli