ರಾಜಕೀಯ

ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ……

By admin

June 03, 2017

ಪರಿಶಿಷ್ಟ  ಜಾತಿ ಮತ್ತು ಪಂಗಡದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಒದಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ನಡೆದ ಅನುಸೂಚಿತ ಜಾತಿ ಉಪ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯ ರಾಜ್ಯ ಪರಿಷತ್‌ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು.

ಇದಕ್ಕಾಗಿ, ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣದಲ್ಲಿ 105 ಕೋಟಿ ರೂ. ಮೀಸಲಿಡಲು ಸಭೆಯಲ್ಲಿ  ನಿರ್ಧರಿಸಲಾಯಿತು.

ಈ ಮುನ್ನ  ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್‌ ಪಾಸ್‌ ನೀಡಲಾಗುತ್ತಿತ್ತು. ರಾಜ್ಯ ಸರ್ಕಾರ ಶೇ.50 ರಷ್ಟು, ಅಂಬೇಡ್ಕರ್‌ ಹಾಗೂ ವಾಲ್ಮೀಕಿ ನಿಗಮದಿಂದ ಶೇ.25 ಹಾಗೂ ವಿದ್ಯಾರ್ಥಿಗಳು ಶೇ.25 ರಷ್ಟು ಭರಿಸುತ್ತಿದ್ದರು.

ಆದರೆ, ಪ್ರಸಕ್ತ ಸಾಲಿನಿಂದ ಸಂಪೂರ್ಣವಾಗಿ ಉಚಿತವಾಗಿ ಬಸ್‌ ಪಾಸ್‌ ನೀಡಬೇಕು. ಎಸ್‌ಸಿಪಿ, ಟಿಎಸ್‌ಪಿ ಹಣದಲ್ಲಿ ವೆಚ್ಚ ಭರಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ.

ವಿಶೇಷ ಘಟಕ ಯೋಜನೆಯಡಿ ಅನುಮೋದನೆಗೊಂಡಿರುವ ಕ್ರಿಯಾ ಯೋಜನೆಗಳನ್ನು ಸಕಾಲದಲ್ಲಿ ಜಾರಿಗೊಳಿಸಿ. ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವಿಳಂಬ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ತಾಕೀತು ಮಾಡಿದರು.

2015-16 ನೇ ಸಾಲಿನ ಉಳಿಕೆ 751 ಕೋಟಿ ರೂ. ಸೇರಿದಂತೆ ಪ್ರಸಕ್ತ ಸಾಲಿನಲ್ಲಿ 27,703 ಕೋಟಿ ರೂ. ಅನುದಾನ ಲಭ್ಯವಿದೆ. ಅದೇ ರೀತಿ 2016-17 ನೇ ಸಾಲಿನಲ್ಲಿ 1,782 ಕೋಟಿ ರೂ. ವೆಚ್ಚವಾಗಿಲ್ಲ.

ಈಗಾಗಲೇ ಕ್ರಿಯಾ ಯೋಜನೆ ಸಿದ್ಧಗೊಂಡಿರುವ ಎಲ್ಲ ಯೋಜನೆಗಳನ್ನು ಮುಂದಿನ ವರ್ಷದ ಮಾರ್ಚ್‌ ಒಳಗೆ ಕಡ್ಡಾಯವಾಗಿ ಅನುಷ್ಠಾನಗೊಳಿಸಿ ಶೇ.100ಕ್ಕೆ 100 ರಷ್ಟು ಸಾಧನೆ ಮಾಡಲೇಬೇಕು ಎಂದಿದ್ದಾರೆ.