ದೇಶದ ರಾಜಕಾರಣದಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್‍ಗಳಾದ ರಜನಿಕಾಂತ್ ಹಾಗೂ ಕಮಲಹಾಸನ್ ಅವರು ರಾಜಕೀಯಕ್ಕೆ ಬರುತ್ತಿರುವ ಬೆನ್ನಲ್ಲೇ ನಮ್ಮ ನಾಡಿನ ರಿಯಲ್‍ಸ್ಟಾರ್ ಉಪೇಂದ್ರ ಸಹ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಉಪೇಂದ್ರ ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಅಂಗಳಕ್ಕೂ ಇಳಿಯಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಹಾಗೂ ಅಭಿಮಾನಿಗಳು ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದಾರಾದರೂ ಈ ಬಗ್ಗೆ ಉಪ್ಪಿ ಎಲ್ಲೂ ಅಧಿಕೃತ ಮಾಹಿತಿ ನೀಡಿಲ್ಲ.
ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಆರಂಭವಾಗಿದ್ದು, ಉಪೇಂದ್ರ ರಾಜಕೀಯ ಪ್ರವೇಶ ಸುದ್ದಿ ದಟ್ಟವಾಗಿದೆ. ಈ ಕುರಿತು ನಾಳೆ ಉಪ್ಪಿ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆಯೂ ಉಪೇಂದ್ರ ರಾಜಕೀಯ ಬರುತ್ತಾರೆ ಎಂದು ಹೇಳಲಾಗುತ್ತಿತ್ತಾದರೂ ಈ ಬಗ್ಗೆ ಅವರು ಅಲ್ಲಗಳೆದಿದ್ದರು. ತಮ್ಮ ಚಿತ್ರಗಳಲ್ಲಿ ಸಮಾಜದಲ್ಲಾಗುತ್ತಿರುವ ಭ್ರಷ್ಟಾಚಾರ ಹಾಗೂ ರಾಜಕಾರಣದ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸಿದ್ದರು.
ಉಪೇಂದ್ರರವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದು, ಈ ಮೂಲಕ ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರ ಕೊಟ್ಟರೇ ಬಿಜೆಪಿ ಸೇರಲಿದ್ದಾರೆಯೇ ಅಥವಾ ತಾವೇ ಸ್ವತಂತ್ರ ಪಕ್ಷ ಕಟ್ಟಲಿದ್ದಾರೆಯೇ ಎಂಬ ಪ್ರಶ್ನೆ ಮೂಡತೊಡಗಿದೆ.
ತಮ್ಮ ರಾಜಕೀಯ ಪ್ರವೇಶದ ಕುರಿತಾಗಿ ಅಭಿಮಾನಿಗಳು, ಆತ್ಮೀಯರೊಂದಿಗೆ ಉಪೇಂದ್ರ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಬೆಳವಣಿಗೆಗಳ ಕುರಿತಾಗಿ ಇತ್ತೀಚೆಗೆ ಟ್ವಿಟರ್ ನಲ್ಲಿ ಅವರು ನೀಡುತ್ತಿದ್ದ ಅಭಿಪ್ರಾಯಗಳು ಹೆಚ್ಚಿನ ಗಮನಸೆಳೆದಿದ್ದವು.
ಆದರೆ ಉಪ್ಪಿ ಅವರ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದಾದರೂ ಪಕ್ಷದ ಚಿಹ್ನೆಯಿಂದಲೋ ಅಥವಾ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೋ ಅಥವಾ ತಾವೇ ಹೊಸ ಪಕ್ಷವನ್ನು ಹುಟ್ಟಿ ಹಾಕುತ್ತಾರೋ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು.
ಅಪಾರ ಅಭಿಮಾನಿಗಳನ್ನು ಹೊಂದಿರುವ ಉಪೇಂದ್ರ ಅವರು ರಾಜಕೀಯಕ್ಕೆ ಪ್ರವೇಶ ಪಡೆಯುತ್ತಿರುವುದಕ್ಕೆ ಅವರ ಅಪಾರ ಅಭಿಮಾನಿಗಳು ಸಹಮತ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ಉಪೇಂದ್ರ ಅವರು ತಮ್ಮ ಸೂಪರ್, ಟೋಪಿವಾಲ, ಓಂಕಾರ ಚಿತ್ರಗಳಲ್ಲಿ ನಮ್ಮ ರಾಜಕಾರಣಿಗಳು ವಿದೇಶಗಳಲ್ಲಿ ಇಟ್ಟಿರುವ ಕಪ್ಪು ಹಣದ ಬಗ್ಗೆ ವಿಷಯದ ಬಗ್ಗೆ ಹಾಗೂ ಎಚ್‍ಟುಒ ಚಿತ್ರದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ನೀರಿನ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಮೂಲಕ ಗಮನ ಸೆಳೆದಿದ್ದರು. ದೇಶದ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿರುವ ಉಪೇಂದ್ರ ಅವರು ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.
ಸಿಕ್ಕಿಂ ಗಡಿಯಲ್ಲಿ ಚೀನಾ ಉದ್ವಿಗ್ನತೆ ಸೃಷ್ಟಿಸಿ ಯುದ್ಧದ ಭೀತಿ ಆವರಿಸಿರೋ ಈ ಹೊತ್ತಿನಲ್ಲಿ ದೇಶದಲ್ಲಿರೋ ನಾವು ಚಿಕ್ಕ ಚಿಕ್ಕ ವಿಷಯಗಳಿಗೆ ಕಚ್ಚಾಡುತ್ತಿದ್ದೇವೆ ಎಂದು, ಉಪೇಂದ್ರರವರು ಇತ್ತೀಚೆಗೆ ಒಂದು ಟ್ವೀಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದರು.
ಭಾರತೀಯರು ಹೇಗಿದ್ದರೂ ಬಂದ್‌ಗಳಿಗೆ ಹೆಸರು ಮಾಡಿದವರು, ಯಾವುದೋ ಸಣ್ಣ ಪುಟ್ಟ ವಿಷಯಕ್ಕೆ ಬಂದ್ ಮಾಡಿ ಬೀದಿಗಿಳಿಯುವ ನಾವು ಯಾಕೆ ಭಾರತ್ ಬಂದ್ ಮಾಡಿ ನಮ್ಮ ಯೋಧರನ್ನು ಬೆಂಬಲಿಸಬಾರದು? ಆ ಮೂಲಕ ಯಾಕೆ ಚೀನಾಗೆ ಎಚ್ಚರಿಕೆ ನೀಡಬಾರದು ಎಂದು ಉಪೇಂದ್ರ ಇತ್ತೀಚೆಗಷ್ಟೇ ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದರು.