ಸುದ್ದಿ

ಉಡುಪಿಯ ಅರಬ್ಬೀ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ…..ಕಾರಣ?

By admin

August 13, 2019

ಜಿಲ್ಲೆಯಲ್ಲಿ ಅರಬ್ಬೀ ಸಮುದ್ರ ಬುಡಮೇಲಾಗಿದೆ. ನೀಲಿ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ. ದಡಕ್ಕೆ ಬರುವ ಅಲೆಗಳು, ನಡು ಸಮುದ್ರದ ಚಿತ್ರಣ ಯುರೋಪಿನ ಸಮುದ್ರವನ್ನು ಹೋಲುತ್ತಿದೆ.

ಮಳೆಯ ರೌದ್ರನರ್ತನದ ಬಳಿಕ ಇದೀಗ ಅರಬ್ಬೀ ಸಮುದ್ರ ಕಪ್ಪುಬಣ್ಣಕ್ಕೆ ತಿರುಗಿದೆ. ಸಾಮಾನ್ಯವಾಗಿ ಪೂರ್ಣಪ್ರಮಾಣದ ಗಾಳಿಮಳೆಯಾದಾಗ ಸಮುದ್ರ ಪ್ರಕ್ಷುಬ್ಧಗೊಳ್ಳುತ್ತದೆ. ಅಲೆಯ ಅಬ್ಬರವೂ ಜೋರಾಗಿ ಕಡಲ ನೀರು ಸಂಪೂರ್ಣ ಉಲ್ಟಾಪಲ್ಟಾವಾಗುತ್ತದೆ. ಈ ಸಂದರ್ಭದಲ್ಲಿ ಸಮುದ್ರದ ಮರಳು, ಅಲೆಯಲ್ಲಿ ಮಿಶ್ರಣಗೊಂಡಾಗ ಸಮುದ್ರ ಕಪ್ಪು ಬಣ್ಣಕ್ಕೆ ತಿರುಗಿದಂತೆ ಭಾಸವಾಗುತ್ತದೆ. ಇದು ನದಿಗಳ ನೀರು ಸಂಗಮಗೊಳ್ಳುವ ಅಳಿವೆ ಬಾಗಿಲ ಬಳಿಯ ಕಡಲು ಸಂಪೂರ್ಣ ಕದಡಿಹೋಗಿದೆ.

ನದಿ ನೀರು ಸಮುದ್ರ ಸೇರುವ ಉಡುಪಿಯ ಪಡುಕೆರೆ, ಕೋಡಿ ಬೆಂಗ್ರೆ, ಗಂಗೊಳ್ಳಿ, ಪಡುಬಿದ್ರೆಯಲ್ಲಿ ಈ ದೃಶ್ಯ ಈಗ ಸಾಮಾನ್ಯವಾಗಿದೆ. ನಿಜವಾಗಿ ಸಮುದ್ರದ ತೀವ್ರತೆ ಮತ್ತು ಭೋರ್ಗರೆತ ಕಣ್ತುಂಬಿಕೊಳ್ಳಬೇಕಾದರೆ ಈಗ ಅರಬ್ಬೀ ಸಮುದ್ರವನ್ನು ನೋಡಬೇಕು.

ಮಾಮೂಲಿಯಾಗಿ ಸಮುದ್ರದ ನೀರು ತಿಳಿಯಾಗಿರುತ್ತದೆ. ನೀಲಿ ಬಣ್ಣದಲ್ಲಿ ಕಂಗೊಳಿಸುತ್ತದೆ. ಪಶ್ಚಿಮ ಘಟ್ಟದ ತಪ್ಪಲು ಮತ್ತು ಕರಾವಳಿ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುಗಿರುವುದಿಂದ ಭಾರೀ ಪ್ರಮಾಣದ ನೀರು ಸಮುದ್ರದತ್ತ ಧುಮ್ಮುಕ್ಕುತ್ತಿದೆ. ಹೀಗಾಗಿ ಸಮುದ್ರ ಪುಡಿಯಾಗಿದೆ. ಹರಿಯುವ ನದಿ ಖನಿಜ, ಲವಣಾಂಶ, ಕೊಳೆತ ತರಗೆಲೆ, ಮರ, ಮಣ್ಣು ಎಲ್ಲವನ್ನೂ ತಂದಿದೆ. ಸಮುದ್ರದ ಉಪ್ಪು ನೀರಿನ ಜೊತೆ ನದಿಯ ಕೆನ್ನೀರು ಸೇರಿ ಕಡಲು ಬಣ್ಣ ಬದಲಿಸಿದೆ.

ನಿಜಾರ್ಥದ ಸಮುದ್ರ ನೋಡುವ ಮನಸ್ಸಿದ್ದವರು ಸಮುದ್ರದ ವೈಭವ ನೋಡುವ ಆಸೆಯಿರುವವರು ಈಗ ಉಡುಪಿಗೆ ಬರಬೇಕು. ಸಮುದ್ರಕ್ಕಿಳಿದು ಆಡುವ ಅವಕಾಶ ಇಲ್ಲದಿದ್ದರೂ ಕಡಲಿನ ಅಬ್ಬರವನ್ನು ಕಣ್ತುಂಬಿಕೊಳ್ಳಬಹುದು.