ಯುವ ಜನರಿಗೆ ಟ್ಯಾಟೂ, ಹಚ್ಚೆಗಳು ಅಂದ್ರೆ ಸ್ವಲ್ಪ ಹೆಚ್ಚೇ ಹುಚ್ಚಿದೆ. ವಾಹನಗಳ ಮೇಲೆ ವಿಭಿನ್ನವಾದ ಸ್ಟಿಕ್ಕರ್ಗಳು ಪ್ರಯೋಗಿಸುವ ಬಗ್ಗೆಯೂ ಆಸಕ್ತಿ ಇರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಕಾರು ಮತ್ತು ಬೈಕ್ಗಳ ಮೇಲೆ ಉಗ್ರ ಸ್ವರೂಪಿ ಆಂಜನೇಯನ ಚಿತ್ರ ರಾರಾಜಿಸುತ್ತಿದೆ. ರಾಜ್ಯದ ಸಾಕಷ್ಟು ಕಡೆಗಳಲ್ಲಿ ಈ ಭಜರಂಗಿ ಓಡಾಡುತ್ತಿದ್ದಾನೆ.
ಯಾರೂ ಈ ಚಿತ್ರದ ಸೃಷ್ಟಿಕರ್ತ?
ಕರಣ್ ಆಚಾರ್ಯ ಮೂಲತಃ ಕಾಸರಗೋಡು ಜಿಲ್ಲೆಯವರು. ಸದ್ಯ ಮಂಗಳೂರಿನ ಕಂಪೆನಿಯೊಂದರಲ್ಲಿ ಆ್ಯನಿಮೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯಾರು ಕರಣ್ ಆಚಾರ್ಯ..?
ಕಾಸರಗೋಡು ಮೂಲದ ಕರಣ್ ಆಚಾರ್ಯ ಚಿಕ್ಕವಯಸ್ಸಿನಿಂದಲೇ ಡ್ರಾಯಿಂಗ್ ಸೇರಿದಂತೆ ಇನ್ನಿತರ ಕಲೆಯಲ್ಲಿ ಆಸಕ್ತಿ ಇದ್ದವರು. ಇದಕ್ಕಾಗಿ ಅವರು ಕಾಸರಗೋಡಿನ ” ರಿದಂ ಸ್ಕೂಲ್ ಆಫ್ ಆರ್ಟ್” ಶಾಲೆಯಲ್ಲಿ ಪದವಿಯನ್ನು ಸಹ ಪಡೆದರು. ನಂತರ ತ್ರಿಶೂರ್ನಲ್ಲಿ ಅನಿಮೇಶನ್ ಅಭ್ಯಾಸ ಮಾಡಿದ್ದಾರೆ.
ಕಳೆದ ವರ್ಷ ಕಾಸರಗೋಡಿನ ಕುಂಬ್ಳೆಯಲ್ಲಿ ಹಿಂದೂ ಸಂಘಟನೆಯ ಯುವಕರು ತಮ್ಮ ಸಂಘಟನೆಗಾಗಿ ವಿಭಿನ್ನ ರೀತಿಯ ಲಾಂಛನ ಮಾಡಿಕೊಡಿ ಎಂದು ಹೇಳಿದ್ದರು. ನಾನು ಭಜರಂಗಿಯ ಚಿತ್ರ ಬಿಡಿಸಿಕೊಟ್ಟಿದ್ದೆ. ಅದು ಅವರಿಗೆ ತುಂಬಾ ಇಷ್ಟವಾಗಿತ್ತು. ಈ ಲಾಂಛನವನ್ನು ಕೆಲವರು ವಾಟ್ಸಾಪ್ ಡಿಪಿ ಮಾಡಿಕೊಂಡರು.
ವಾಟ್ಸಾಪ್ ಡಿಪಿ ಮಾಡುವಾಗ ಭಜರಂಗಿಯ ಮುಖ ಮಾತ್ರ ಕಾಣಿಸಿಕೊಳ್ಳುತ್ತದೆ. ಫುಲ್ ಫೋಟೋ ಬರಲ್ಲ ನೋಡಿ. ಹಾಗೆ ಒಬ್ಬರಿಂದ ಒಬ್ಬರಿಗೆ ಅದು ಶೇರ್ ಆಗುತ್ತಾ ಬಂತು. ಆಮೇಲೆ ನಮ್ಮೂರಿನ ಹುಡುಗರು ಆ ಚಿತ್ರವನ್ನು ಬೈಕ್ ನಲ್ಲಿ ಹಾಕಿಸಿಕೊಂಡ್ರು.
ನಮ್ಮ ಹುಡುಗರೇ ಅಲ್ವಾ… ಹಾಕಿಸಿಕೊಳ್ಳಲಿ ಅದಕ್ಕೇನಂತೆ ಎಂದು ನಾನೂ ಸುಮ್ಮನಿದ್ದೆ. ಆಮೇಲೆ ಗೊತ್ತಾಯ್ತು, ಇದು ನಮ್ಮೂರು ಬಿಟ್ಟು ಬೇರೆ ಊರಿನಲ್ಲಿಯೂ ಕ್ರೇಜ್ ಹುಟ್ಟಿಸಿದೆ ಅಂತ. ಕಳೆದ ವರ್ಷ ಬಿಡಿಸಿದ ಚಿತ್ರ ಈಗ ವೈರಲ್ ಆಗುತ್ತಿದೆ. ಈ ಬಗ್ಗೆ ತುಂಬಾ ಖುಷಿಯೆನಿಸುತ್ತಿದೆ.
‘ಹನುಮಂತ ಸಾಮಾನ್ಯವಾಗಿ ವಿನೀತನಾಗಿ ಕಾಣಿಸಿಕೊಳ್ಳುತ್ತಾನೆ. ನೀವೇಕೆ ಹೀಗೆ ಚಿತ್ರಿಸಿದಿರಿ…’ ಎಂದು ಅನೇಕರು ಕೇಳುತ್ತಾರೆ.
ಒಬ್ಬ ಕಲಾವಿದನಾಗಿ ಹನುಮಾನ್‌ಗೆ ಯಾವ ರೂಪ ಬೇಕಾದರೂ ಕೊಡಬಹುದು. ರಾಮ– ರಾವಣ ಯುದ್ಧದಲ್ಲಿ ಅವ ಉಗ್ರರೂಪಿಯಾಗಿರುತ್ತಾನೆ. ಲಂಕಾದಹನದ ವೇಳೆಯೂ ಅವನು ಉಗ್ರರೂಪದಲ್ಲಿರುತ್ತಾನೆ. ಆದರೆ ರಾಮನ ಜತೆ ಇರುವಾಗ ಮಾತ್ರ ಅವನು ಶಾಂತರೂಪಿ. ಬಿಡುವು ಸಿಕ್ಕಾಗಲೆಲ್ಲಾ ಶಾಂತರೂಪದ ಹನುಮಂತನ ಚಿತ್ರ ರಚಿಸಬಹುದು. ಈ ಹಿಂದೆ ಶಾಂತರೂಪದ ಹನುಮಂತನ ಚಿತ್ರ ಬಿಡಿಸಿ ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಮಾಡಿದ್ದೆ. ಅದು ಸುದ್ದಿಯಾಗಲಿಲ್ಲ. ಆದರೆ ಉಗ್ರರೂಪಿ ಹನುಮ ಎಲ್ಲರನ್ನೂ ಆಕರ್ಷಿಸಿಬಿಟ್ಟ.
ಮೀಸೆಯಿರುವ ಶಿವನ ಚಿತ್ರ ಬಿಡಿಸಿದಾಗ ಶಿವನಿಗೆ ಮೀಸೆಯಿದೆಯಾ? ಎಂದು ಕೆಲವರು ಕೇಳಿದ್ರು. ಯಾಕೆ ಇರಬಾರದು? ಇಲ್ಲಿಯವರೆಗೆ ಶಿವನ ಕಲಾಕೃತಿಯಲ್ಲಿ ಮೀಸೆ ಇರಲಿಲ್ಲ. ಹಾಗಾಗಿಯೇ ಮೀಸೆ ಇರುವ ಶಿವನನ್ನು ಸೃಷ್ಟಿಸಿದೆ. ಒಬ್ಬ ಕಲಾವಿದನ ಮನಸ್ಸಿನಲ್ಲಿ ಯಾವ ಭಾವನೆ ಮೂಡುತ್ತದೋ ಅದನ್ನೇ ಅವನು ಕುಂಚದ ಮೂಲಕ ಹೇಳುತ್ತಾನೆ ಅಲ್ಲವೇ? ಹನುಮ ಹಿಟ್ ಆಯ್ತು.
ನಮ್ಮೂರಲ್ಲಿ ನಮ್ಮ ಹುಡುಗರಿಗಾಗಿ ಆ ಚಿತ್ರ ಬಿಡಿಸಿದ್ದು. ಇದು ಇಷ್ಟೊಂದು ಸದ್ದು ಮಾಡುತ್ತದೆ ಎಂದು ಊಹಿಸಿರಲಿಲ್ಲ. ಚಿತ್ರ ವೈರಲ್ ಆದ ಮೇಲೆ ಕಾಪಿರೈಟ್ ಮಾಡುವುದಕ್ಕಾಗುವುದಿಲ್ಲವಲ್ಲಾ . ಆದ್ರೆ ಜನ ಅದು ನನ್ನ ಕಲಾಕೃತಿ ಎಂದು ಜನ ಗುರುತಿಸಿದ್ದಾರಲ್ಲಾ, ನನಗೆ ಆ ಖುಷಿಯಿದೆ.