ಕೆಲ ದಿನಗಳ ಹಿಂದೆ ಗುರ್ಗಾಂವ್ ನ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಯಾರಾದರೂ ಸತ್ತರೆ ಪರೀಕ್ಷೆ ಮುಂದೂಡುತ್ತಾರೆಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ತನ್ನದೇ ಶಾಲೆಯ ಪುಟ್ಟ ಬಾಲಕನನ್ನು ಹತ್ಯೆ ಮಾಡಿದ್ದ.
ಮಕ್ಕಳಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚುತ್ತಿರುವ ಕಾರಣ ಆತಂಕಗೊಂಡಿರುವ ಲಕ್ನೋದ ಹಲ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಬ್ಯಾಗ್ ಚೆಕ್ ಮಾಡಿದ್ದು, ಅದರಲ್ಲಿ ಕಂಡು ಬಂದ ವಸ್ತುಗಳನ್ನು ನೋಡಿ ಅಕ್ಷರಶಃ ಶಾಕ್ ಆಗಿದ್ದಾರೆ. 9 ನೇ ತರಗತಿ ವಿದ್ಯಾರ್ಥಿಯೊಬ್ಬ ಸೆಕ್ಸ್ ಮ್ಯಾಗಜೀನ್ ಗೆ ಶಾಲಾ ಪಠ್ಯ ಪುಸ್ತಕದಂತೆ ಬೈಂಡ್ ಮಾಡಿ ಅದಕ್ಕೆ ಲೇಬಲ್ ಸಹ ಅಂಟಿಸಿದ್ದನೆನ್ನಲಾಗಿದೆ.
ಇತ್ತೀಚೆಗಷ್ಟೇ ಲಕ್ನೋದಲ್ಲಿ 6 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ರಜೆ ಸಿಗಲೆಂಬ ಕಾರಣಕ್ಕೆ 1 ನೇ ತರಗತಿ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದಿದ್ದು, ಗಾಯಗೊಂಡಿದ್ದ ಬಾಲಕ ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.
ಇನ್ನು ಕೆಲ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಸಿಗರೇಟ್, ಲೈಟರ್, ಚಾಕು, ರೇಜರ್, ಐ ಪ್ಯಾಡ್, ಮೊಬೈಲ್ ಫೋನ್ ಸಿಕ್ಕಿವೆ. ವಿದ್ಯಾರ್ಥಿನಿಯರ ಬ್ಯಾಗ್ ನಲ್ಲಿ ಲಿಪ್ ಸ್ಟಿಕ್, ನೇಲ್ ಪಾಲಿಶ್, ರೇಜರ್, ಮೊಬೈಲ್ ಫೋನ್ ಮೊದಲಾದ ವಸ್ತುಗಳು ಸಿಕ್ಕಿವೆ.
ಈ ವಿದ್ಯಾರ್ಥಿಗಳ ಪೋಷಕರಿಗೆ ಈಗ ಮಾಹಿತಿ ನೀಡಲಾಗಿದ್ದು, ಒಂದು ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾರಣ ಪ್ರತಿ ದಿನವೂ ವಿದ್ಯಾರ್ಥಿಗಳ ಬ್ಯಾಗ್ ಚೆಕ್ ಮಾಡಲಾಗುವುದಿಲ್ಲ. ಪೋಷಕರೇ ತಮ್ಮ ಮಕ್ಕಳು ಮನೆಯಿಂದ ಹೊರಡುವಾಗ ಬ್ಯಾಗ್ ಪರೀಕ್ಷಿಸುವುದು ಒಳಿತು ಎಂದು ಶಿಕ್ಷಕರು ಪೋಷಕರಿಗೆ ತಿಳಿಸಿದ್ದರು.