ಪ್ರಕೃತಿಯ ವೈಚಿತ್ರ್ಯಒಮ್ಮೊಮ್ಮೆ ಎಲ್ಲರನ್ನೂ ಬೆರಗಾಗಿಸುತ್ತದೆ. ಬರೀ ಕಲ್ಪನೆಯಲ್ಲಿ ಮಾತ್ರ ಇದ್ದಂತಹ ವಸ್ತುಗಳು, ಜೀವಿಗಳು ಇದ್ದಕ್ಕಿದ್ದಂತೆ ಧುತ್ತನೆ ನಮಗೆದುರಾಗುತ್ತವೆ. ಸದ್ಯ ಚೀನಾದಲ್ಲಿ ಆಗಿರುವುದು ಇದೇ. ಮತ್ಸ್ಯಕನ್ಯೆ ಎಂಬ ಕಲ್ಪನೆ ನಮ್ಮಲ್ಲಿದೆ. ಈ ಹೆಸರು ಹೇಳಿದ ತಕ್ಷಣ ನಮಗೆ ಅರ್ಧ ಮೀನಿನ ದೇಹ, ಅರ್ಧ ಸುಂದರಿಯ ದೇಹ ಕಣ್ಣೆದುರು ಸುಳಿಯುತ್ತದೆ.
ನಿಜವಾಗಿಯೂ ಮತ್ಸ್ಯ ಕನ್ಯೆಯನ್ನು ಕಂಡವರಿಲ್ಲ. ಇವೆಲ್ಲ ಬರೀ ನಮ್ಮ ಕಲ್ಪನೆಯ ಪರಿಧಿಯಲ್ಲಿ ಇರುವ ಅಂಶಗಳು. ಆದರೆ,ಕೆಲವೊಮ್ಮೆ ನಮ್ಮ ಕಲ್ಪನೆಯಲ್ಲಿರುವ ವಸ್ತುಗಳೇ ಧುತ್ತನೆ ಪ್ರತ್ಯಕ್ಷವಾಗಿ ನಮ್ಮನ್ನೇ ಒಂದು ಕ್ಷಣ ಆಶ್ಚರ್ಯ ಚಕಿತರನ್ನಾಗಿಸುತ್ತವೆ. ಸದ್ಯ ಚೀನಾದಲ್ಲಿ ಒಂದು ಮೀನು ತುಂಬಾ ಅಚ್ಚರಿಗೆ ಕಾರಣವಾಗಿದೆ. ಕಾರಣ, ಈ ಮೀನಿನ ಮುಖ ಮನುಷ್ಯನ ಮುಖವನ್ನು ಹೋಲುತ್ತಿದೆ.
ದಕ್ಷಿಣ ಚೀನಾದ ಕುನ್ಮಿಂಗ್ ನಗರದ ಪ್ರವಾಸಿ ತಾಣವಾದ ಮಿಯಾವೋ ಗ್ರಾಮಕ್ಕೆ ಪ್ರವಾಸಿಗರೊಬ್ಬರು ಹೋಗಿದ್ದ ಸಂದರ್ಭದಲ್ಲಿ ಈ ಮೀನು ಕ್ಯಾಮೆರಾಕ್ಕೆ ಸೆರೆಯಾಗಿದೆ. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೀನಿಗೆ ಮನುಷ್ಯರಂತೆ ಮೂಗು, ಕಿವಿ ಬಾಯಿ ಇದ್ದಂತೆ ಗೋಚರಿಸುತ್ತದೆ.
ಸದ್ಯ 15 ಸೆಕೆಂಡಿನ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಕೆಲವರು ಈ ಮೀನನ್ನು ಕಂಡು ಅಚ್ಚರಿಗೊಳಗಾಗಿದ್ದರೆ, ಇನ್ನು ಕೆಲವರು ಈ ಮೀನನ್ನು ತಿನ್ನುವ ಧೈರ್ಯ ಯಾರಿಗೆ ಬರಬಹುದು ಎಂದು ಪ್ರಶ್ನಿಸಿದ್ದಾರೆ. ಈ ಮೀನಿನ ವಿಡಿಯೋ ನೋಡಿದಾಗ ನಿಜಕ್ಕೂ ಒಂದು ಕ್ಷಣ ನಾವೆಲ್ಲಾ ಬೆರಗಾಗುತ್ತೇವೆ… ನಮ್ಮ ಪ್ರಕೃತಿಯಲ್ಲಿ ಇಂತಹ ಇನ್ನೆಷ್ಟು ವೈಚಿತ್ರ್ಯಗಳು ಅಡಗಿವೆಯೋ… ಆ ಪ್ರಕೃತಿ ಮಾತೆಗೇಗೊತ್ತು.