ನ್ಯಾಯಬೆಲೆ ಅಂಗಡಿಗಳಲ್ಲಿಯೇ ಇನ್ನುಮುಂದೆ ಬಸ್, ರೈಲು ಹಾಗೂ ವಿಮಾನ ಟಿಕೆಟ್ ಕಾಯ್ದಿರಿಸಬಹುದಾಗಿದೆ. ವಿದ್ಯುತ್ ಬಿಲ್ ಪಾವತಿ ಹಾಗೂ ಮೊಬೈಲ್ ರಿಚಾರ್ಜ್ ಸೇವೆಗಳು ಲಭ್ಯವಾಗಲಿವೆ. ರಾಜ್ಯ ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಗೆ ಬುಧವಾರ (ಆ. 2) ಚಾಲನೆ ದೊರೆಯಲಿದೆ.
“ನ್ಯಾಯಬೆಲೆ ಅಂಗಡಿಗಳು ಇನ್ನು ಮುಂದೆ ಸೇವಾ ಸಿಂಧು ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕ”ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಜೊತೆಗೆ ಬಸ್, ರೈಲು, ವಿಮಾನ ಟಿಕೆಟ್ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುವುದು.
ಕೇಂದ್ರ ಸರ್ಕಾರ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ ಎಸ್ಪಿವಿ) ಏಜೆನ್ಸಿ ಮೂಲಕ ನ್ಯಾಯಬೆಲೆ ಅಂಗಡಿಗಳಿಗೆ ಉಚಿತವಾಗಿ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಿ ಕೊಡಲಾಗುತ್ತದೆ. ಇದರಿಂದ ನ್ಯಾಯಬೆಲೆ ಅಂಗಡಿಯವರಿಗೆ ಆದಾಯ ಬರುತ್ತದೆ. ರಾಜ್ಯ ಸರ್ಕಾರ ನ್ಯಾಯಬೆಲೆ ಅಂಗಡಿಯವರಿಗೆ ನೀಡುವ ಕಮಿಷನ್‌ನನ್ನು ಮೂರು ವರ್ಷಗಳವರೆಗೆ ಸಿಎಸ್ಸಿ ಎಜೆನ್ಸಿಗೆ ನೀಡಲಾಗುವುದು ಎಂದು ಹೇಳಿದರು..
ಪ್ರಾಥಮಿಕ ಹಂತದಲ್ಲಿ ಬೆಂಗಳೂರಿನ ಒಟ್ಟು 10 ನ್ಯಾಯಬೆಲೆ ಅಂಗಡಿಗಳಲ್ಲಿ ಈ ಸೇವೆ ಪ್ರಾರಂಭಗೊಳ್ಳಲಿವೆ. ಬೊಮ್ಮಸಂದ್ರ, ಮತ್ತಿಕೆರೆ, ರೆಹಮತ್ನಗರ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಎಲ್ಲ ಸೇವೆಗಳನ್ನು ಆಹಾರ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ.ನ್ಯಾಯಬೆಲೆ ಅಂಗಡಿ ಎಂದರೆ ಕೇವಲ ಪಡಿತರ ವಿತರಣೆ ಮಾತ್ರವಲ್ಲ, ವಿವಿಧ ಸೇವೆಗಳು ಲಭ್ಯವಾಗುವಂತೆ ಮಾಡಬೇಕು. ಆ ಮೂಲಕ ನ್ಯಾಯಬೆಲೆ ಅಂಗಡಿಗಳನ್ನು ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಪ್ರಮುಖ ಹೆಜ್ಜೆಯನ್ನು ಇರಿಸಲಾಗುತ್ತಿದೆ. ಇದು ದೇಶದ ಇತಿಹಾಸದಲ್ಲಿಯೇ ಮೊದಲ ಪ್ರಯತ್ನ ಎನ್ನಲಾಗಿದೆ.
ವಿಸ್ತರಣೆ ಉದ್ದೇಶ:-
ರಾಜ್ಯದಲ್ಲಿ ಒಟ್ಟು 24 ಸಾವಿರ ನ್ಯಾಯಬೆಲೆ ಅಂಗಡಿಗಳಿವೆ. ಹಂತಹಂತವಾಗಿ ರಾಜ್ಯದ ಇತರೆ ಜಿಲ್ಲೆಗಳಿಗೂ ಯೋಜನೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಸಾರಿಗೆ, ವಿಮಾನಯಾನ, ಬೆಸ್ಕಾಂ ಹಾಗೂ ಜನರ ನಡುವಿನ ಕೊಂಡಿಯಾಗಿ ನ್ಯಾಯಬೆಲೆ ಅಂಗಡಿಗಳು ಕಾರ್ಯ ನಿರ್ವಹಿಸಲಿವೆ. ಸಂಬಂಧಪಟ್ಟ ಇಲಾಖೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಫ್ರಾಂಚೈಸಿ ಪಡೆದುಕೊಳ್ಳಲಿವೆ. ಬೆಂಗಳೂರು ಒನ್ ಮಾದರಿ ಸೇವೆಗಳು ಇಲ್ಲಿ ಲಭ್ಯವಾಗಲಿವೆ.
ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಇದು ದೊಡ್ಡ ವರದಾನವಾಗಲಿದೆ. ಬಸ್ ಹಾಗೂ ರೈಲು ಟಿಕೆಟ್ಗಳನ್ನು ಮುಂಗಡವಾಗಿ ಕಾಯ್ದಿರಿಸಲು ನಗರ ಪ್ರದೇಶಗಳಿಗೆ ಬರುವ ಅನಿವಾರ್ಯತೆಯನ್ನು ತಪ್ಪಿಸಲು ಸರ್ಕಾರ ಈ ಸೌಲಭ್ಯ ನೀಡುತ್ತಿದೆ.ನ್ಯಾಯಬೆಲೆ ಅಂಗಡಿಗಳನ್ನು ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಿ ಎಲ್ಲ ಸೇವೆಯೂ ಒಂದೆಡೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದು ಬಹು ವಿಶೇಷ ಯತ್ನ.