ದೇವರು-ಧರ್ಮ

ಇದೇ ತಿಂಗಳ ಇಪ್ಪತ್ತೊಂಬತ್ತನೇ ತಾರೀಕು ವೈಕುಂಠ ಏಕಾದಶಿ ಹಾಗೂ ಮೂವತ್ತರಂದು ಮುಕ್ಕೋಟಿ ದ್ವಾದಶಿ ಇದೆ!ಈ ಆಚರಣೆ ಮಾಡಿದ್ರೆ ಏನಾಗುತ್ತೆ ಗೊತ್ತಾ..?

By admin

December 27, 2017

ಇದೇ ತಿಂಗಳ ಇಪ್ಪತ್ತೊಂಬತ್ತನೇ ತಾರೀಕು ವೈಕುಂಠ ಏಕಾದಶಿ ಹಾಗೂ ಮೂವತ್ತರಂದು ಮುಕ್ಕೋಟಿ ದ್ವಾದಶಿ ಇದೆ. ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ. ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.

ಏನಿದು ವೈಕುಂಠ ಏಕಾದಶಿ..?

“ವೈಕುಂಠಏಕಾದಶಿ” ಇದರಲ್ಲಿ ಎರಡು ಪದಗಳು ಸೇರಿಕೊಂಡಿವೆ. ಒಂದು “ವೈಕುಂಠ”, ಎರಡನೆಯದು ಏಕಾದಶಿ, ಮೊದಲು ಇವುಗಳ ಸ್ಥೂಲ ಅರ್ಥ ಹೀಗಿದೆ: “ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರು ಬರಲು ಕಾರಣ ಚಾಕ್ಷುಷ ಮನ್ವಂತರದಲ್ಲಿ ವಿಷ್ಣುವು ವಿಕುಂಠ ಯೆಂಬ “ಸ್ತ್ರೀ”ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತೆಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ.

“ಏಕಾದಶಿ” ಎಂದರೆ ಹನ್ನೊಂದನೆಯ ತಿಥಿ. “ಏಕಾದಶಿ” ಒಂದು ವ್ರತ. ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು. ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು. ಎಂದರೆ ಶುಚಿರ್ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ.

ವೈಕುಂಠ ಏಕಾದಶಿಯ ಪ್ರಾಮುಖ್ಯತೆ…

ವೈಕುಂಠ ಏಕಾದಶಿಯ ಪ್ರಾಮುಖ್ಯತೆ ಪದ್ಮ ಪುರಾಣದಲ್ಲಿ ಉಲ್ಲೇಖವಾಗಿದೆ. ಪುರಾಣದ ಪ್ರಕಾರ ವಿಷ್ಣುವು ಏಕಾದಶಿ, ಅಂದರೆ ಹೆಣ್ಣಿನ ರೂಪ ಪಡೆದು ಮುರನ್ ಎಂಬ ರಾಕ್ಷಸನನ್ನು ಮಾರ್ಗಶಿರ ಮಾಸದಲ್ಲಿ ಕೊಲ್ಲುತ್ತಾನೆ. ಇಂದಿನ ದಿನ ವಿಷ್ಣುವನ್ನು ಯಾರು ಪೂಜಿಸುತ್ತಾರೋ ಅಂಥವರು ಸತ್ತ ಮೇಲೆ ಮೋಕ್ಷವನ್ನು ಪಡೆದು ವೈಕುಂಠವನ್ನು ಸೇರುತ್ತಾರೆ ಎಂದು ವಿಷ್ಣು ಹೇಳುತ್ತಾನೆ.

ಏಕಾದಶಿ ಆಚರಣೆ ಮಾಡುವುದು ಹೇಗೆ..?

ಅಂದು ವೈಕುಂಠ ಏಕಾದಶಿ ಆಚರಣೆ ಮಾಡಲು ಇಷ್ಟ ಪಟ್ಟವರು ಹುಳಿ, ಉಪ್ಪು, ಖಾರ ಇರುವ ತಿಂಡಿಗಳನ್ನು ಸೇವಿಸಬಾರದು.ಹಾಲು,ಬಾಳೆಹಣ್ಣು,ಸಜ್ಜಿಗೆ ತಿನ್ನಬಹುದು. ಎಲ್ಲಾ ಏಕಾದಶಿಯ ದಿನಗಳ ಹಾಗೆ ಇಂದಿನ ದಿನವೂ ಜನರು ಉಪವಾಸ ಮಾಡಿ ಇಡೀ ರಾತ್ರಿ ಜಾಗರಣೆ ಮಾಡುತ್ತಾರೆ. ಕೆಲವರು ಜಪ, ತಪ್ಪಸ್ಸು ಹಾಗು ಹರಿ ಕೀರ್ತನೆಯನ್ನು ಹಾಡುತ್ತಾರೆ. ಏಕಾದಶಿಯಂದು ಅಕ್ಕಿ ಸೇವಿಸುವುದಲ್ಲಿ ಏಕೆಂದರೆ ನಂಬಿಕೆಗಳ ಪ್ರಕಾರ ಮುರನ್ ಎಂಬ ರಾಕ್ಷಸನು, ತಿಂದಿರುವ ಅನ್ನದ ಅಗಳಲ್ಲಿ ಏಕಾದಶಿಯ ದಿನ ಅವಿತುಕೊಂಡಿರುತ್ತಾನೆ.

ಭಗವಂತನ ದರ್ಶನ ಮಾಡುವುದು ಹೇಗೆ..?

ಇಂದಿನ ದಿನ ವೈಕುಂಠದ ಬಾಗಿಲಿಗಳು ತೆರೆದಿರುತ್ತದೆ. ವಿಷ್ಣು ದೇವಸ್ಥಾನಗಳಲ್ಲಿ ಈ ದಿನ ಅತಿ ವಿಶೇಷವಾದದ್ದು ಹಾಗು ಇಂದಿನ ದಿನ ವೈಕುಂಠ ದ್ವಾರ ಎಂಬ ಬಾಗಿಲನ್ನು ತೆರೆಯಲಾಗುತ್ತದೆ. ಗರ್ಭ ಗುಡಿಯ ಒಳಭಾಗವನ್ನು ಸುತ್ತುವರೆದಿರುವ ಈ ದ್ವಾರದ ಮೂಲಕ ಭಕ್ತರು ಪ್ರದಕ್ಷಿಣೆಯನ್ನು ಹಾಕುತ್ತಾರೆ. ವೈಕುಂಠ ಏಕಾದಶಿ ಶ್ರೀರಂಗಂ ನಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನ, ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನ, ಭದ್ರಾಚಲಂ ದೇವಸ್ಥಾನ ಹಾಗು ಮುಂತಾದ ದೇವಸ್ಥಾನಗಳಲ್ಲಿ ಬಹಳ ವಿಶೇಷ.

ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ವೈಷ್ಣವ ಆಲಯಗಳಲ್ಲಿ ಉತ್ತರ ದ್ವಾರದ ಬಳಿ ಮುಂಜಾನೆ ಭಗವಂತನ ದರ್ಶನಕ್ಕಾಗಿ ಕಾದಿರುತ್ತಾರೆ.ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನ ದರ್ಶನ ಮಾಡಿ, ವೈಕುಂಠ ದ್ವಾರದ ಮೂಲಕ ಹೊರ ಬರಬೇಕು. ಹೀಗೆ ಮಾಡಿದ್ರೆ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಅನ್ನೋದು ನಂಬಿಕೆ.

ವೈಕುಂಠ ದ್ವಾರದಲ್ಲಿ ತೋರಿ ಹೋಗುವುದೆಂದರೆ ನಾವು ತಲೆ ಬಾಗಿ ಹೋಗಬೇಕು. ಇಲ್ಲಿ ತಲೆ ಬಾಗುವುದರ ಅರ್ಥ ಏನೆಂದರೆ,ನಮ್ಮ ಅಹಂಕಾರವನ್ನು ಕಳೆದುಕೊಳ್ಳುವುದು.ಅಂದರೆ ನಾವು ಅಹಂಕಾರ ಬಿಟ್ಟಾಗ ಮಾತ್ರ ನಿಜವಾದ ಭಗವಂತನ ದರ್ಶನವಾಗುತ್ತದೆ.

ಮುಕ್ಕೋಟಿ ದ್ವಾದಶಿ ಅಂದರೇನು..?

ವೈಕುಂಠ ಏಕಾದಶಿಯನ್ನು ಈ ಹೆಸರಿನಲ್ಲಿ ಕೂಡ ಕರೆಯುತ್ತಾರೆ. ಈ ದಿನದಂದು ವಿಷ್ಣುವಿನ ಆರಾಧನೆಯನ್ನು ಮಾಡುವುದು ಜನನ ಮತ್ತು ಮರಣದ ನೋವಿನಿಂದ ಮುಕ್ತಿಯನ್ನು ನೀಡುತ್ತದೆ ಎಂದಾಗಿದೆ. ಈ ಚಕ್ರದಿಂದ ಆತ್ಮವು ಬಿಡುಗಡೆ ಹೊಂದಿ, ವಿಷ್ಣುವಿನ ಪಾದದಲ್ಲಿ ಸಮಾಧಾನವನ್ನು ಹೊಂದುತ್ತದೆ ಎಂದಾಗಿದೆ. ಆದ್ದರಿಂದ ಈ ಪವಿತ್ರ ದಿನದಂದು ವಿಷ್ಣು ಭಕ್ತರು ಉಪವಾಸವನ್ನು ಕೈಗೊಳ್ಳುತ್ತಾರೆ. ಈ ದಿನ ಮಹಾವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದುಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಆದಕಾರಣ ಇದಕ್ಕೆ ಮುಕ್ಕೋಟಿ ಏಕಾದಶಿ ಎಂಬ ಹೆಸರು . ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಗಳು , ಹೋಮ, ಹವನ ಜಪ ,ತಪಗಳು ನಡೆಯುತ್ತವೆ .ಈ ದಿನ ಉಪವಾಸ ಹಾಗು ಜಾಗರಣೆ ಮಾಡಿದರೆ ಒಳ್ಳೆಯದಂತೆ.