ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ 2 ಹಂತದಲ್ಲಿ ಮತದಾನ ನಡೆದಿದ್ದು, ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿದೆ. ಇದಕ್ಕೆ ನಿದರ್ಶನವೆನ್ನುವಂತೆ ಚುನಾವಣೆ ಆಯೋಗ ವಿವಿಧೆಡೆ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂ. ಜಪ್ತಿ ಮಾಡಿದೆ.
ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಖರ್ಚು ವೆಚ್ಚದ ಮಾಹಿತಿ ನೀಡಿದ್ದು, ಆಯೋಗ ನಿಗದಿಪಡಿಸಿದ 70 ಲಕ್ಷ ರೂ. ಮಿತಿಯನ್ನು ಯಾರೂ ದಾಟಿಲ್ಲ. ಹೈ ವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ 33 ಲಕ್ಷ ರೂ. ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸಿದ್ದಾರೆ.
ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರ್ 39 ಲಕ್ಷ ರೂ. ಖರ್ಚು ಮಾಡಿದ್ದಾರೆ. ಚುನಾವಣಾ ಅಧಿಕಾರಿಗಳು ಇಟ್ಟಿರುವ ಲೆಕ್ಕಕ್ಕೆ ಇವರು ಕೊಟ್ಟಿರುವ ಖರ್ಚಿನ ಲೆಕ್ಕ ತಾಳೆ ಆಗದ ಹಿನ್ನೆಲೆಯಲ್ಲಿ ವಿವರಣೆ ಕೇಳಲಾಗಿದೆ ಎಂದು ಹೇಳಲಾಗಿದೆ.
ಇನ್ನು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ 21.77 ಲಕ್ಷ ರೂ. ಖರ್ಚು ಮಾಡಿದ್ದು, ಆಯೋಗ 51.75 ಲಕ್ಷ ರೂ. ಖರ್ಚು ಮಾಡಿರುವುದಾಗಿ ಲೆಕ್ಕ ಇಟ್ಟಿದೆ. ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ 18.23 ಲಕ್ಷ ರೂ. ಖರ್ಚು ಮಾಡಿದ್ದು, ಆಯೋಗ 42.53 ಲಕ್ಷ ರೂ. ಲೆಕ್ಕ ಇಟ್ಟಿದೆ.