ಮೌಢ್ಯಾಚರಣೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕೆಂಬ ಸರ್ಕಾರದ ಪ್ರಯತ್ನ ವಿಫಲವಾಯಿತು. ಆದರೆ ಕೋಟೆನಾಡಿನಲ್ಲಿರುವ ಐತಿಹಾಸಿಕ ಹಿನ್ನೆಲೆಯ ಮುರುಘಾ ಮಠ ಮಾತ್ರ ಮೌಢ್ಯ ನಿಷೇಧದ ವಿಚಾರದಲ್ಲಿ ತನ್ನ ಗುರಿಯನ್ನು ಮೊಟಕುಗೊಳಿಸದೇ ಆಷಾಢದಲ್ಲೂ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಮೌಢ್ಯಾಚರಣೆ ವಿರುದ್ಧ ಸಮರ ಸಾರಿದೆ.
ಮುರುಘಾ ಮಠದ ಆಶ್ರಯದಲ್ಲಿ ಅಲ್ಲಮಪ್ರಭು ಭವನದಲ್ಲಿ ಆಯೋಜಿಸಿದ್ದ 29ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿದೆ. ಆಷಾಢ ಶುಕ್ರವಾರವಾದರೂ ಸಹ ಮುರುಘಾಮಠ ನುಡಿದಂತೆ ನಡೆಯುತ್ತಿದೆ. ಮೌಢ್ಯಾಚರಣೆ ನಿಷೇಧಕ್ಕಾಗಿ ಟೊಂಕಕಟ್ಟಿ ನಿಂತಿರುವ ಡಾ. ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಸಾಮೂಹಿಕ ವಿವಾಹ ನೆರವೇರಿಸಿದ್ದಾರೆ. ಈ ಕಲ್ಯಾಣೋತ್ಸವದಲ್ಲಿ 32 ನವಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.
ಈ ವಿವಾಹ ಮಹೋತ್ಸವದಲ್ಲಿ ಅಂತರ್‌ಧರ್ಮ ವಿವಾಹವಾದ ಹಿಂದೂ ಹಾಗೂ ಇಸ್ಲಾಂ ಧರ್ಮದ ಒಂದು ಜೋಡಿಯು ಎಲ್ಲರ ಗಮನ ಸೆಳೆಯಿತು. ಅಲ್ಲದೇ ಸಾಮೂಹಿಕ ವಿವಾಹದಲ್ಲಿ ಅಂತರ್ ಧರ್ಮ ವಿವಾಹದ ಮೂಲಕ ನವಜೀವನಕ್ಕೆ ಪಾದಾರ್ಪಣೆ ಮಾಡಿದ ಹಸೀನ ಕೂಡ ತಮ್ಮ ಜೀವನಕ್ಕೆ ಬಸವತತ್ವವನ್ನು ಅಳವಡಿಸಿಕೊಂಡಿದ್ದಾರೆ.
ಸಮಾಜ ಪರಿವರ್ತನೆಗಾಗಿ ಅಂತರ್ಜಾತಿ ಹಾಗೂ ಅಂತರ್‌ಧರ್ಮ ವಿವಾಹಗಳಿಂದಾದರೂ ಈ ಮೌಢ್ಯ ನಿಷೇಧವಾಗಬೇಕೆಂದು ನೂತನ ವಧು ಹಸೀನ ಹೇಳಿದ್ದಾರೆ.ಮುರುಘಾ ಮಠದಲ್ಲಿ ನಡೆದ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವ ಜಾತಿ ಧರ್ಮಗಳನ್ನು ಮೀರಿ ನಿಂತಿದೆ. ಆಷಾಢ ಶುಕ್ರವಾರ ಅನ್ನೋದನ್ನೂ ಲೆಕ್ಕಿಸದೇ 32 ನವಜೋಡಿಗಳು ನವಜೀವನಕ್ಕೆ ಕಾಲಿಡುವ ಮೂಲಕ ಮೌಢ್ಯ ನಿಷೇಧಕ್ಕೆ ಪ್ರೇರಣೆಯಾದರು.