ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಮೊಬೈಲ್ ಚಾರ್ಜರ್‌ನ್ನು ಇನ್ನೊಬ್ಬರಿಂದ ಪಡೆಯುವುದು ಸಹಜ. ಇನ್ನೇನು ಸ್ವಿಚ್ ಆಫ್ ಆಗುತ್ತದೆ ಎನ್ನುವ ವೇಳೆ ಇನ್ನೊಬ್ಬರಿಂದ ಚಾರ್ಜರ್ ಕೇಳುತ್ತೇವೆ. ಆದರೆ ಇನ್ನು ಮುಂದೆ ಈ ರೀತಿ ಪಡೆಯುವಾಗ ಎಚ್ಚರದಿಂದ ಇರಿ.
ಹೌದು, ಚಾರ್ಜರ್ ಪಡೆಯುವುದರಿಂದ ಏನು ಸಮಸ್ಯೆ ಎಂದು ಯೋಚಿಸುತ್ತಿದ್ದರೆ, ಈ ರೀತಿ ಚಾರ್ಜಿಂಗ್ ಕೇಬಲ್ ಪಡೆಯುವುದರಿಂದಲೂ ಮೊಬೈಲ್ ಗೆ ವೈರಸ್ ಬರುವ ಸಾಧ್ಯತೆಯಿದೆ ಎನ್ನುವ ಆಘಾತಕಾರಿ ವರದಿ ಹೊರ ಬಿದಿದ್ದೆ. ಐಬಿಎಂ ಸೆಕ್ಯುರಿಟಿಯ ಸಂಶೋಧನೆಯಲ್ಲಿ ಈ ಅಂಶ ಬಯಲಾಗಿದೆ.
ಇನ್ನೊಬ್ಬರ ಮೊಬೈಲ್ ಕೇಬಲ್ ಚಾರ್ಜರ್ ಪಡೆಯುವ ವೇಳೆ ಮಾಲ್ ವೇರ್ ಅಥವಾ ವೈರಸ್ ನಿಮ್ಮ ಮೊಬೈಲ್‌ಗೆ ಅಟ್ಯಾಕ್ ಆಗುವ ಸಾಧ್ಯತೆಯಿದ್ದು, ಇದರಿಂದ ನಿಮ್ಮ ಮೊಬೈಲ್ ನಲ್ಲಿರುವ ಎಲ್ಲ ಡೇಟಾ, ಪಾಸ್ ವಾರ್ಡ್ ಹ್ಯಾಕರ್ ಗಳ ಪಾಲಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಕೆಲ ಚಾರ್ಜಿಂಗ್ ಕೇಬಲ್ ನಲ್ಲಿ ಸಣ್ಣ ಚಿಪ್ ಗಳನ್ನು ಅಳವಡಿಸಲಾಗುತ್ತದೆ. ಈ ಚಿಪ್ ಗಳು ಒಮ್ಮೆ ಮೊಬೈಲ್ ಚಾರ್ಜಿಂಗ್ ಪೋರ್ಟಲ್ ನಲ್ಲಿ ಹೋದರೆ, ರಿಮೋಟ್ ಕಂಟ್ರೊಲ್ ಮೂಲಕ ಡೇಟಾ ಪಡೆಯಬಹುದು ಎಂದು ಸಂಶೋಧನೆ ಹೇಳಿದೆ.
ಈ ಬಗ್ಗೆ ತಂಡದ ನೇತೃತ್ವ ವಹಿಸಿದ್ದ ಹೆಂಡರ್‌ಸನ್ ಮಾತನಾಡಿದ್ದು, ಚಿಕ್ಕ ಚಿಪ್ ಆಗಿರುವುದರಿಂದ ಯಾರಿಗೂ ತಿಳಿಯುವುದಿಲ್ಲ. ಈ ಮಾಲ್‌ವೇರ್ ಕೇವಲ ಕೇಬಲ್ ಪಡೆಯುವುದರಿಂದ ಮಾತ್ರವಲ್ಲದೇ, ಏರ್‌ಪೋರ್ಟ್‌ನಲ್ಲಿರುವ ಸಾರ್ವಜನಿಕ ಕೇಬಲ್, ಕಾಫಿ ಶಾಪ್‌ನಲ್ಲಿರುವ ಚಾರ್ಜಿಂಗ್‌ನಿಂದಲೂ ಬರಬಹುದು. ಆದ್ದರಿಂದ ನಿಮ್ಮ ಮೊಬೈಲ್ ಕೇಬಲ್ ಗಳನ್ನು ನೀವೇ ಪ್ರತ್ಯೇಕವಾಗಿಟ್ಟುಕೊಳ್ಳಿ. ಒಂದು ವೇಳೆ ಕೇಬಲ್ ಇಲ್ಲದಿದ್ದರೆ, ಹೊಸ ಕೇಬಲ್ ಪಡೆಯಿರಿ ಎಂದಿದ್ದಾರೆ.