ಅಕ್ಕಿ ಯನ್ನು ಉಪಯೋಗಿಸದವರು ಯಾರಿದ್ದಾರೆ ಹೇಳಿ ನೋಡೋಣ, ಆದರೆ ಇತ್ತೀಚಿನ ದಿನಗಳಲ್ಲಿ ನಕಲಿ ಪ್ಲಾಸ್ಟಿಕ್ ಅಕ್ಕಿ ಮಾರುಕಟ್ಟೆಗೆ ಬಂದಿರುವುದನ್ನು ಕೇಳಿರುತ್ತೀರಿ. “ಅನ್ನಂ ಪರಬ್ರಂಹ ಸ್ವರೂಪಮ್” ಎಂದು ದೊಡ್ಡವರು ಹೇಳಿದ್ದಾರೆ. ಆದರೆ ಧನದಾಸೆಯ ದುರುಳರು ನಮ್ಮ ಅನ್ನದ ರೂಪದಲ್ಲಿ ಈ ವಿಷವನ್ನುಣಿಸಲು ಪ್ರಯತ್ನಿಸುತ್ತಿರುವುದು ನಿಜವಾಗಿಯೂ ಆತಂಕಕಾರಿ.
ಈ ಅಕ್ಕಿ ನಿಜವಾದ ಅಕ್ಕಿಯನ್ನು ಎಷ್ಟು ಮಟ್ಟಿಗೆ ಚೆನ್ನಾಗಿ ಹೋಲುತ್ತದೆ ಎಂದರೆ, ಅಕ್ಕಿ ವ್ಯಾಪಾರಿಗಲಿಂದಲೂ ಕೂಡ ಕಂಡುಹಿಡಿಯಲು ಕಷ್ಟವಾಗಿದೆ. ಅಷ್ಟೇ ಅಲ್ಲ, ಇದು ಮಾಮೂಲಿ ಅನ್ನದಂತೆಯೇ ಬೆಂದು ಅರಳುತ್ತದೆ ಸಹಾ.
ಅಷ್ಟೇ ಅಲ್ಲದೇ ಇದರ ಸೇವನೆಯಿಂದ ಹಿರಿಯರ ಸಹಿತ ಮಕ್ಕಳ ಆರೋಗ್ಯಕ್ಕೂ ಮಾರಕವಾಗಬಹುದಾಗಿದ್ದು ಇದನ್ನು ಸೇವಿಸುವ ಮುನ್ನ ಇದು ನಿಜವಾದದ್ದೇ ಅಲ್ಲವೇ ಎಂದು ಪ್ರಮಾಣಿಸಿಕೊಳ್ಳುವುದೇ ಜಾಣತನದ ಕ್ರಮ. ನಿಜವಾದ ಅಕ್ಕಿಯಲ್ಲಿ ಪ್ರಮುಖವಾಗಿ ಪಿಷ್ಟವಿದ್ದರೆ ಪ್ಲಾಸ್ಕಿಕ್ ಅಕ್ಕಿಯಲ್ಲಿ ಥಾಲೇಟ್ (phthalate) ಎಂಬ ಅಂಶವಿರುತ್ತದೆ. ಇವು ಪಿಷ್ಟಕ್ಕೆ ಹೆಚ್ಚು ಕಡಿಮೆ ಸರಿಸಮನಾಗಿದ್ದು ಅಕ್ಕಿಯಂತೆಯೇ ಬೆಂದು ಅರಳುತ್ತದೆ.
ಆದರೆ ಹೊಟ್ಟೆಗೆ ಹೋದ ಬಳಿಕ ಇವು ಜೀರ್ಣಕ್ರಿಯೆಯನ್ನು ಅಡ್ಡಿಪಡಿಸುವುದು ಮಾತ್ರವಲ್ಲ, ಹಾರ್ಮೋನುಗಳನ್ನು ಏರುಪೇರುಗೊಳಿಸುವ ಮೂಲಕ ಸಂತಾನಶಕ್ತಿಯನ್ನೂ ಹೀರಿಬಿಡುತ್ತದೆ.
ಆದ್ದರಿಂದ ಈ ಅಕ್ಕಿಯನ್ನು ಗುರುತಿಸಿ ತಿನ್ನದೇ ಇರುವುದು ಹಾಗೂ ಸಂಬಂಧಪಟ್ಟವರಿಗೆ ಹಾಗೂ ಸುತ್ತಮುತ್ತಲಿನವರಿಗೆ ಸೂಚನೆ ನೀಡುವ ಮೂಲಕ ಎದುರಾಗಬಹುದಾದ ಅಪಾಯದಿಂದ ತಪ್ಪಿಸಬಹುದು.
ಹಾಗಾದರೆ ಇದನ್ನು ಕಂಡುಹಿಡಿಯುವುದಾದರು ಹೇಗೆ? ಇಲ್ಲಿವೆ ಕೆಲುವು ಸೂಚನೆಗಳು….
- ಒಂದು ವೇಳೆ ಅನುಮಾನ ಬಂದರೆ ಒಂದು ದೊಡ್ಡ ಚಮಚದಷ್ಟು ಅನುಮಾನವಿರುವ ಅಕ್ಕಿಯನ್ನು ತೆಗೆದುಕೊಂಡು ಬೆಂಕಿಕಡ್ಡಿ ಗೀರಿ ಬೆಂಕಿಯನ್ನು ನೇರವಾಗಿ ಅಕ್ಕಿಗೆ ತಾಕುವಂತೆ ಮಾಡಿ.
- ಒಂದು ವೇಳೆ ಪ್ಲಾಸ್ಟಿಕ್ ಸುಟ್ಟ ವಾಸನೆ ಬಂದರೆ ಇದರಲ್ಲಿ ಪ್ಲಾಸ್ಟಿಕ್ ಇದೆ ಎಂದು ಅರ್ಥ. ನಿಜವಾದ ಅಕ್ಕಿಯಾದರೆ ಜ್ವಾಲೆ ತಾಕಿದ ಭಾಗ ಸುಟ್ಟು ಬೇರೆಯೇ ವಾಸನೆ ಬರುತ್ತದೆ.
- ಒಂದು ದೊಡ್ಡಚಮಚದಷ್ಟು ಅಕ್ಕಿಯನ್ನು ಒಂದು ಕಾವಲಿಯ ಮೇಲೆ ಇರಿಸಿ ಒಣಗಿರುವಂತೆಯೇ ಹುರಿಯಿರಿ. ನಿಜವಾದ ಅಕ್ಕಿಯಾದರೆ ಬಾಣಲಿ ತಾಕಿದ ಭಾಗ ಕಂದು ಬಣ್ಣ ತಳೆಯುತ್ತದೆ.
- ಪ್ಲಾಸ್ಟಿಕ್ ಅಕ್ಕಿಯಾದರೆ ಅಕ್ಕಿ ಕಾವಲಿಗೆ ಅಂಟಿದ ಭಾಗ ಕರಗಿ ಚಿಕ್ಕ ವೃತ್ತಾಕಾರದ ಪದರ ರೂಪುಗೊಳ್ಳುತ್ತದೆ. ಈ ಅಕ್ಕಿಯನ್ನು ಸರ್ವಥಾ ಸೇವಿಸಕೂಡದು.
- ಒಂದು ದೊಡ್ಡಚಮಚದಷ್ಟು ಅಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕಲಕಿ. ನಿಜವಾದ ಅಕ್ಕಿ ನೀರಿನಲ್ಲಿ ಮುಳುಗುತ್ತದೆ ಹಾಗೂ ಅಡ್ಡಲಾಗಿರುತ್ತದೆ. ಪ್ಲಾಸ್ಟಿಕ್ ಅಕ್ಕಿಯಾದರೆ ನೀರಿನಲ್ಲಿ ತೇಲುತ್ತದೆ.
- ಒಂದು ವೇಳೆ ತೇಲದೇ ಇದ್ದರೂ ಅಕ್ಕಿಯಂತೆ ತಕ್ಷಣವೇ ಮುಳುಗದೇ ತಿರುಗುತ್ತಿರುವ ನೀರಿನಲ್ಲಿ ಕೊಂಚ ಹೊತ್ತು ತಿರುಗುತ್ತಲೇ ಇರುತ್ತದೆ ಹಾಗೂ ಇನ್ನೂ ಒಂದು ವೇಳೆ ಆಳಕ್ಕಿಳಿದರೂ ಅಕ್ಕಿಯಂತೆ ಅಡ್ಡಲಾಗಿರದೇ ನೇರವಾಗಿ ನಿಲ್ಲುತ್ತದೆ.
- ಒಂದು ಮುಷ್ಟಿಯಷ್ಟು ಅಕ್ಕಿಯನ್ನು ಕುದಿನೀರಿನಲ್ಲಿ ಹಾಕಿ ಅನ್ನ ಮಾಡಿ. ಕೊಂಚ ಹೊತ್ತಿನ ಬಳಿಕ ಪಾತ್ರೆಯಲ್ಲಿರುವ ನೀರಿನ ಮೇಲ್ಪದರವನ್ನು ಗಮನಿಸಿ.
- ಇಲ್ಲಿ ದಪ್ಪನೆಯ ಬಿಳಿಯಾದ ಪದರವೊಂದು ರೂಪುಗೊಳ್ಳುತ್ತಿರುತ್ತದೆ. ಇದು ಪ್ಲಾಸ್ಟಿಕ್ ಕರಗಿ ಗಾಳಿಗೆ ಗಟ್ಟಿಯಾದ ಪದರವಾಗಿದೆ.
- ಕೆಲವು ಪ್ಲಾಸ್ಟಿಕ್ ಅಕ್ಕಿ ಮೇಲಿನ ಯಾವುದೇ ವಿಧಾನಕ್ಕೆ ತನ್ನ ಗುಟ್ಟು ಬಿಟ್ಟುಕೊಡುವುದಿಲ್ಲ. ಇದನ್ನು ಕಂಡುಕೊಳ್ಳಲು ಕೊಂಚ ಹೆಚ್ಚಿನ ಕಾಲಾವಕಾಶ ಬೇಕು. ಅನ್ನವನ್ನು ಬೇಯಿಸಿ ಎರಡು ದಿನಗಳ ಕಾಲ ಗಾಳಿಗೆ ತೆರೆದಿಡಿ.
- ನಿಜವಾದ ಅಕ್ಕಿಯಾದರೆ ಒಂದೇ ದಿನಕ್ಕೆ ಬೂಸು ಬರುತ್ತದೆ. ಎರಡನೆಯ ದಿನಕ್ಕೆ ಬೂಸು, ಶಿಲೀಂಧ್ರ ಎಲ್ಲವೂ ಬರಲೇಬೇಕು. ಆದರೆ ಪ್ಲಾಸ್ಟಿಕ್ ಅಕ್ಕಿಗೆ ಯಾವುದೇ ವಾಸನೆ ಬರುವುದಿಲ್ಲ.
- ಕೆಲವರು ನೀಡಿರುವ ಸಲಹೆಯ ಪ್ರಕಾರ ಒಂದು ಮುಷ್ಟಿಯಷ್ಟು ಬಿಸಿ ಅನ್ನವನ್ನು ಕೈಬೆರಳುಗಳಿಂದಲೇ ಉಂಡೆಕಟ್ಟಿ ಸತತವಾಗಿ ಒಂದು ಅಥವಾ ಎರಡು ನಿಮಿಷಗಳ ಕಾಲ ಚೆಂಡಿನ ಆಕೃತಿ ಬರಿಸಿ. ತಣ್ಣಗಾದ ಬಳಿಕ ಈ ಚೆಂಡನ್ನು ಮೇಜಿನ ಮೇಲೆ ಬಡಿಯಿರಿ.
- ಒಂದು ವೇಳೆ ಇದು ಪ್ಲಾಸ್ಟಿಕ್ ಅಕ್ಕಿಯಾಗಿದ್ದರೆ ಚೆಂಡಿನಂತೆಯೇ ಪುಟಿಯುತ್ತದೆ, ಒಡೆಯುವುದಿಲ್ಲ. ನಿಜವಾದ ಅಕ್ಕಿಯನ್ನು ಎಷ್ಟೇ ಉಂಡೆಗಟ್ಟಿದರೂ ಕೆಳಗೆ ಬಿದ್ದ ತಕ್ಷಣ ಒಡೆದು ಚೂರುಚೂರಾಗುತ್ತದೆ.