ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡಿವೆ.
ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರನ್ನು ಪತ್ತೆಹಚ್ಚಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಸರ್ಕಾರ ಬಿಪಿಎಲ್ ಪಡಿತರ ಚೀಟಿ ಪಡೆಯಲು 1.20 ಲಕ್ಷ ರೂ. ಒಳಗೆ ಕುಟುಂಬದ ಆದಾಯ ನಿಗದಿಪಡಿಸಿದೆ. ಆದಾಯವನ್ನು ಮೀರಿದ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ್ದಾರೆ.
ನೌಕರರು, ವರ್ತಕರು, ಅಂಗಡಿಗಳ ಮಾಲೀಕರು, ಗುತ್ತಿಗೆದಾರರು ಹೀಗೆ ಆರ್ಥಿಕವಾಗಿ ಸಬಲರಾದವರು ಕೂಡ ನಕಲಿ ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆನ್ನಲಾಗಿದ್ದು, ಈ ನಿಟ್ಟಿನಲ್ಲಿ ಪತ್ತೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವ ಸದೃಢರು 2019ರ ಸೆಪ್ಟೆಂಬರ್ 30ರ ಒಳಗೆ ಕಾರ್ಡ್ ವಾಪಸ್ ಮಾಡಬೇಕು. ಇಲ್ಲವೇ ಅಂತಹ ಅನರ್ಹರನ್ನು ಸರ್ಕಾರವೇ ಪತ್ತೆಮಾಡಿ ಅವರು ಎಷ್ಟು ದಿನದಿಂದ ಅಕ್ಕಿ ಪಡೆದಿದ್ದಾರೆ ಎಂಬುದನ್ನು ಲೆಕ್ಕಹಾಕಿ ಮುಕ್ತ ಮಾರುಕಟ್ಟೆ ದರ ಒಂದು ಕೆಜಿಗೆ 35 ರೂ. ನಂತೆ ದಂಡ ವಸೂಲಿ ಮಾಡಲಾಗುವುದು. ಕಾನೂನು ಕ್ರಮ ಜರುಗಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಲಾಗಿದೆ.