ಸುದ್ದಿ

31ನೇ ವರ್ಷಕ್ಕೆ ಕಾಲಿಟ್ಟ ಕ್ಯಾಪ್ಟನ್ ವಿರಾಟ್​ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ..!

By admin

November 05, 2019

ಶ್ರದ್ಧೆ ಹಾಗೂ ಬದ್ಧತೆಗೆ ಹೆಸರಾಗಿರುವ ಆಟಗಾರ ವಿರಾಟ್ ಕೊಹ್ಲಿ. ಕ್ರಿಕೆಟ್ ಲೋಕದ ಹಲವು ಶ್ರೇಷ್ಠ ಆಟಗಾರರಿಂದ ‘ಕಿಂಗ್ ಕೊಹ್ಲಿ’ ಎಂದು ಕರೆಸಿಕೊಳ್ಳುತ್ತಿರುವ ವಿರಾಟ್​ ಕೊಹ್ಲಿ, ಸಚಿನ್ ನಿರ್ವಿುಸಿದ್ದ ದಾಖಲೆಗಳನ್ನು ಒಂದೊಂದಾಗಿ ಹಿಮ್ಮೆಟ್ಟಿಸುತ್ತ ಸಾಗುತ್ತಿದ್ದಾರೆ. ಕ್ರಿಕೆಟ್ ಲೋಕವೇ ನಿಬ್ಬೆರಗಾಗುವಂತೆ ಮಾಡಿರುವ ಕಿಂಗ್ ಕೊಹ್ಲಿ ಇಂದು ಬರ್ತಡೇ ಸಂಭ್ರಮದಲ್ಲಿದ್ದಾರೆ.

ಟೆಸ್ಟ್ ನಾಯಕತ್ವ ಮತ್ತು ಬ್ಯಾಟಿಂಗ್​​​ನಲ್ಲಿ ಯಶಸ್ಸು ಕಂಡಿರುವ ವಿರಾಟ್​ ಕೊಹ್ಲಿ, ಸದ್ಯ ಕ್ರಿಕೆಟ್​​ನಿಂದ ಬಿಡುವು ಪಡೆದಿದ್ದು, ಪತ್ನಿ ಅನುಷ್ಕಾ ಶರ್ಮಾ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಇಂದು 31ನೇ ವರ್ಷದ ಜನ್ಮ ದಿನವನ್ನು ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಆಚರಿಸಿಕೊಳ್ಳುತ್ತಿದ್ದಾರೆ. ವಿಶ್ವ ದಿಗ್ಗಜರು ಹಾಗೂ ಕ್ರಿಕೆಟ್​ ಅಭಿಮಾನಿಗಳು ಕೊಹ್ಲಿಯ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಿದ್ದು, ಟ್ವಿಟರ್​ನಲ್ಲಿ HappyBirthdayVirat  ಟ್ರೆಂಡಿಂಗ್ ಆಗಿದೆ.

ಸದ್ಯ ಟೀಮ್ ಇಂಡಿಯಾದ ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ, ಟೀಮ್ ಇಂಡಿಯಾದ ಸೂಪರ್​ ಸ್ಟಾರ್​ ಆಗಿದ್ದಾರೆ. ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಟೆಸ್ಟ್ ಚಾಂಪಿಯನ್​​ಶಿಪ್​​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ವೆಸ್ಟ್ ಇಂಡೀಸ್ ವಿರುದ್ಧ 2-0 ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಟೆಸ್ಟ್ ಶ್ರೇಯಾಂಕದಲ್ಲೂ ನಂ.1 ಸ್ಥಾನ ಗಟ್ಟಿಗೊಳಿಸಿಕೊಂಡಿದೆ. ಇದೀಗ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ, ಟೆಸ್ಟ್ ಸರಣಿ ವೇಳೆಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.