ಸ್ಪೂರ್ತಿ

ಸ್ವಂತ ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿ ಜಾನುವಾರಗಳ ದಾಹ ನೀಗಿಸಿದ ಅನ್ನದಾತ. ಈ ಸುದ್ದಿ ನೋಡಿ.

By admin

November 15, 2019

ಜಾನುವಾರುಗಳ ದಾಹ ನೀಗಿಸಿದ ಜಲದಾತ-ಸ್ವಂತ ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿದ ಅನ್ನದಾತ ಕಾಫಿನಾಡಿನ ವೀರಣ್ಣ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ವಿಟ್ಲಾಪುರದ ನಿವಾಸಿಯಾಗಿರುವ 63 ವರ್ಷದ ವೀರಣ್ಣ ಗೋಕಟ್ಟೆ ನಿರ್ಮಿಸಿದ್ದಾರೆ. 9ನೇ ತರಗತಿವರೆಗೆ ಮಾತ್ರ ಓದಿರುವ ವೀರಣ್ಣ, ಕೃಷಿಯೊಂದಿಗೆ ಮತ್ತು ಮೂಕ ಪ್ರಾಣಿಗಳ ದಿನನಿತ್ಯ ಸೇವೆ ಮಾಡುತ್ತಿದ್ದಾರೆ. ಅರೆಮಲೆನಾಡಾಗಿರುವ ಚಿಕ್ಕಮಗಳೂರಲ್ಲಿ ಬೇಸಿಗೆ ವೇಳೆ ಜಾನುವಾರುಗಳಿಗೆ ನೀರು ಸಿಗೋದು ಕಷ್ಟ ಆಗಿತ್ತು. ಕುಡಿಯಲು ನೀರು ಸಿಗದೇ ದನಕರು ಪರದಾಡೋದನ್ನು ನೋಡಲಾಗದ ವೀರಣ್ಣ, ಮೂರು ವರ್ಷದ ಹಿಂದೆ ಅರಣ್ಯ ಇಲಾಖೆ ಅನುಮತಿ ಪಡೆದು ಒಂದು ಎಕರೆ ಜಾಗದಲ್ಲಿ ಐದು ಲಕ್ಷ ರೂ. ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವೀರಣ್ಣ ಅವರು ಅಪ್ಪಟ ಸಾವಯವ ಕೃಷಿಕ. 20 ವರ್ಷಗಳಿಂದ ಸುತ್ತಮುತ್ತಲ ಹಳ್ಳಿಗರಿಗೆ ಇವ್ರೇ ಕೃಷಿ ಸಂಪನ್ಮೂಲ ವ್ಯಕ್ತಿಯಾಗಿ ಸಲಹೆ ನೀಡುತ್ತಿದ್ದಾರೆ. ಸಮೀಪದ ಕಾಡಲ್ಲಿ ಅನಾವಶ್ಯಕವಾಗಿ ನೀರು ಹರಿದು ಹೋಗುತ್ತಿದ್ದ ನೀರನ್ನು ಗೋಕಟ್ಟೆಗೆ ತಿರುಗಿಸಿದ್ದಾರೆ. ಈಗ ಗೋಕಟ್ಟೆ ನೀರಿನಿಂದ ತುಂಬಿದ್ದು, ಜಾನುವಾರುಗಳಲ್ಲದೇ ಕಾಡುಪ್ರಾಣಿಗಳ ದಾಹವೂ ನೀಗುತ್ತಿದೆ. ಗೋಕಟ್ಟೆ ನಿರ್ಮಿಸಲು ಇವರು ಬೇರೆಯವರಿಂದ ಚಿಕ್ಕಾಸು ಕೇಳಿರಲಿಲ್ಲ.

ಆದರೆ ಸ್ವಾಮೀಜಿಯೊಬ್ಬರು ಸ್ವಂತ ಹಣದಲ್ಲಿ ಕೆರೆ ನಿರ್ಮಿಸಿದ್ರೆ ಸಾರ್ವಜನಿಕರದ್ದು ಅನ್ನಿಸಿಕೊಳ್ಳಲ್ಲ. ಹಾಗಾಗಿ ಜನರು ನೀಡುವ ಹಣ ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಸ್ವಾಮೀಜಿಗಳ ಸಲಹೆ ಮೇರೆಗೆ ಜನ ನೀಡಿದಷ್ಟು ಹಣ ಪಡೆದುಕೊಂಡಿದ್ದರು. ಈ ಕಾಲದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡೋರು ಕಡಿಮೆ. ದನಕರುಗಳಿಗಾಗಿ ಗೋಕಟ್ಟೆ ನಿರ್ಮಿಸಿದ ವೀರಣ್ಣ ನಿಜಕ್ಕೂ ಇತರರಿಗೆ ಮಾದರಿಯಾಗಿದ್ದಾರೆ.