ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೌಡ್ತಿಯಲ್ಲ ನಾಯ್ಡು ಎಂದು ಸಂಸದ ಶಿವರಾಮೇಗೌಡ ಮಾಡುತ್ತಿರುವ ಜಾತಿ ರಾಜಕೀಯಕ್ಕೆ ಸಚಿವ ಎಂಟಿಬಿ ನಾಗರಾಜ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹೌದು, ಮಂಡ್ಯ ಚುನಾವಣಾ ಅಖಾಡದಲ್ಲಿ ಜಾತಿ ರಾಜಕಾರಣದ ಕೆಸರೆರಚಾಟ ತೀವ್ರಗೊಂಡಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೌಡ್ತಿಯಲ್ಲ, ನಾಯ್ಡು ಎಂದು ಮಾತಿನುದ್ದಕ್ಕೂ ಶಿವರಾಮೇಗೌಡ ವಾಗ್ದಾಳಿ ನಡೆಸಿದ್ರು. ಇದೀಗ ಶಿವರಾಮೇಗೌಡ ಮಾಡ್ತಿರೋ ಜಾತಿ ರಾಜಕಾರಣಕ್ಕೆ ಸಚಿವ ಎಂಟಿಬಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿಯಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್, ಯಾವುದೇ ಹೆಣ್ಣಿಗೂ ಮದುವೆಯಾಗಿ ಒಂದು ಮಗುವಾದ ಮೇಲೆ ಪತಿ ಜಾತಿಯೇ ಬರುತ್ತೆ ಹೊರತು ಆಕೆಯ ತಾಯಿಯ ಮನೆಯ ಜಾತಿಯಲ್ಲ. ಹೀಗಾಗಿ ರಾಜಕೀಯದಲ್ಲಿ ಜಾತಿಯನ್ನು ತರಬೇಡಿ. ನಮ್ಮ ಸರ್ಕಾರ ಮಾಡಿರುವ ಸಾಧನೆಗಳನ್ನು ಹಿಡಿದು ಜನರ ಮುಂದೆ ಮತ ಯಾಚಿಸಬೇಕು ಎಂದಿದ್ದಾರೆ.
ಕೆಲವರು ಜನರ ಭಾವನೆಗಳನ್ನು ಕೆರಳಿಸುವ ನಿಟ್ಟಿನಲ್ಲಿ ಈ ರೀತಿ ಜಾತಿ ರಾಜಕೀಯವನ್ನು ಮಾಡಲು ಮುಂದಾಗಿದ್ದು, ಯಾರೊಬ್ಬರೂ ಜಾತಿ ರಾಜಕೀಯ ಮಾಡಲು ಮುಂದಾಗಬಾರದು ಎಂದು ಸಲಹೆ ನೀಡಿದರು. ಈ ಬಾರಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದು, ಸರ್ಕಾರದ ಸಾಧನೆಗಳನ್ನು ಹೇಳಿ ಕೈ ಮುಗಿದು ಜನರ ಮುಂದೆ ಮತಯಾಚನೆ ಮಾಡಬೇಕು ಎಂದರು.