ಸುದ್ದಿ

ಕೊನೆಗೂ ಶಬರಿ ಮಲೆ ಪ್ರವೇಶ ಮಾಡಿ ಅಯ್ಯಪ್ಪನ ದರ್ಶನ ಪಡೆದ ಇಬ್ಬರು ಮಹಿಳೆಯರು..!ಬಂದ್ ಆಯ್ತು ದೇವಸ್ಥಾನ…

By admin

January 02, 2019

ಅಯ್ಯಪ್ಪ ಸ್ವಾಮಿ ಭಕ್ತರ ತೀವ್ರ ಪ್ರತಿಭಟನೆ ಹೊರತಾಗಿಯೂ 50 ವರ್ಷದೊಳಗಿನ ಇಬ್ಬರು ಮಹಿಳೆಯರು ಇಂದು ಮುಂಜಾನೆ ಶಬರಿಮಲೆಯಲ್ಲಿ ದರ್ಶನ ಪಡೆದಿದ್ಜಾರೆ ಎಂದು ಹೇಳಲಾಗುತ್ತಿದೆ.50 ವರ್ಷ ಮೀರದ ಇಬ್ಬರು ಮಹಿಳೆಯರು ಶಬರಿಮಲೆ ದೇವಾಲಯವನ್ನು ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದು, ಇದೀಗ ಭಾರೀ ಚರ್ಚೆಯಾಗುತ್ತಿದೆ.

ಮಧ್ಯರಾತ್ರಿ ಬೆಟ್ಟವನ್ನು ಹತ್ತಲು ಆರಂಭಿಸಿದ ಮಹಿಳೆಯರು ಇಂದು ಬೆಳಗ್ಗೆ 3.45ರ ವೇಳೆಗೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.ದರ್ಶನ ಪಡೆದ ಮಹಿಳೆಯರನ್ನು ಮಲಪ್ಪುರಂನ ಕನಕ ದುರ್ಗ ಮತ್ತು ಕಲ್ಲಿಕೋಟೆಯ ಬಿಂದು ಎಂದು ಗುರುತಿಸಲಾಗಿದೆ. ಈ ಮಹಿಳೆಯರಿಗೆ ಸಮವಸ್ತ್ರ ಧರಿಸಿದ್ದ ಪೊಲೀಸರು ರಕ್ಷಣೆ ನೀಡಿದ್ದಾರೆ.

ಮಹಿಳೆಯರು ಅಯ್ಯಪ್ಪ ಸನ್ನಿದಾನಕ್ಕೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಸುಪ್ರೀಂ ಕೋರ್ಟ್ ಆದೇಶದ ಬಳಿಕ ಇದೇ ಮೊದಲ ಬಾರಿಗೆ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಿ ದೇವರ ದರ್ಶನ ಪಡೆದಿದ್ದಾರೆ.

18 ಮೆಟ್ಟಿಲ ಬದಲಿಗೆ ಪರ್ಯಾಯ ಮಾರ್ಗದಲ್ಲಿ ಸನ್ನಿಧಾನ ಏರಿದ ಮಹಿಳೆಯರುಇನ್ನು ಅಯ್ಯಪ್ಪನ ಭಕ್ತರು ಪೂಜ್ಯನೀಯ ಎಂದು ಭಾವಿಸುವ 18 ಮೆಟ್ಟಿಲುಗಳ ಬದಲಿಗೆ ಮಹಿಳೆಯರು ಸನ್ನಿಧಾನಕ್ಕೆ ತೆರಳಲು ಪರ್ಯಾಯ ಮಾರ್ಗದಲ್ಲಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.ಡಿಸೆಂಬರ್ ನಲ್ಲಿ ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಿಲು ಪ್ರಯತ್ನ ನಡೆಸಿದ್ದರು. ಆದರೆ ಈ ವೇಳೆ ಭಾರೀ ಪ್ರತಿಭಟನೆ ನಡೆದ ಪರಿಣಾಮ ದೇವಾಲಯ ಪ್ರವೇಶಿಸುವ ನಿರ್ಧಾರದಿಂದ ಮಹಿಳೆಯರು ಹಿಂದಕ್ಕೆ ಸರಿದಿದ್ದರು.

50 ವರ್ಷ ಮೀರದ ಮಹಿಳೆಯರು ಪ್ರವೇಶಿಸಿದ ಹಿನ್ನೆಲೆಯಲ್ಲಿ ಶಬರಿಮಲೆಯ ಅಯ್ಯಪ್ಪ ದೇವಾಲಯವನ್ನು ಬಂದ್ ಮಾಡಲಾಗಿದೆ. ಸಂಪ್ರದಾಯಕ್ಕೆ ಅಡ್ಡಿಯಾಗಿದೆ ಎಂದು ಹೇಳಿ ಅರ್ಚಕರು ದೇವಾಲಯವನ್ನು ಬಂದ್ ಮಾಡಿದ್ದಾರೆ.ಮಹಿಳೆಯರ ಪ್ರವೇಶದಿಂದ ದೇವಾಲಯ ಅಪವಿತ್ರಗೊಂಡಿದೆ. ಹೀಗಾಗಿ ಕಲಶ ಶುದ್ಧಿಗಾಗಿ ಬಂದ್ ಮಾಡಿದ್ದೇವೆ ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ.