ಕರ್ನಾಟಕ

ರೆಡಿಯಾಯ್ತು ದೇಶದ ಅತ್ಯಂತ ದೊಡ್ಡದಾದ ಮೆಟ್ರೋ ನಿಲ್ದಾಣ…

By admin

June 13, 2017

ದೇಶದಲ್ಲೇ ಅತ್ಯಂತ ದೊಡ್ಡ ಮೆಟ್ರೋ ನಿಲ್ದಾಣ, ಏಕಕಾಲದಲ್ಲಿ 20,000 ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿರುವ, ಮೆಜೆಸ್ಟಿಕ್‌ನ ‘ಕೆಂಪೇಗೌಡ ಇಂಟರ್‌ಚೇಂಜ್‌  ಮೆಟ್ರೊ ನಿಲ್ದಾಣ’ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ.

ಈ ನಿಲ್ದಾಣದ ಬಹುತೇಕ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದ್ದು, ಪ್ರಯಾಣಿಕರಿಗೆ ಆಸನ ವ್ಯವಸ್ಥೆ, ಮಾರ್ಗಸೂಚಿ ಫಲಕಗಳನ್ನು ಅಳವಡಿಸುವ ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಇದ್ದು ಸ್ವಲ್ಪ ದಿನಗಳಲ್ಲೇ ಪೂರ್ಣಗೊಳ್ಳಲಿದೆ.

ಈ ನಿಲ್ದಾಣಕ್ಕೆ ಬರುವ ರೈಲುಗಳು ನಗರದ ನಾಲ್ಕೂ ದಿಕ್ಕಿನಿಂದ ಪ್ರಯಾಣಿಕರನ್ನು ಹೊತ್ತು ತರಲಿವೆ. ಉತ್ತರ–ದಕ್ಷಿಣ ಕಾರಿಡಾರ್‌ (ಯಲಚೇನಹಳ್ಳಿ– ನಾಗಸಂದ್ರ ಮಾರ್ಗ) ಹಾಗೂ ಪೂರ್ವ ಪಶ್ಚಿಮ ಕಾರಿಡಾರ್‌ (ಬೈಯಪ್ಪನಹಳ್ಳಿ– ಮೈಸೂರು ರಸ್ತೆ ಮಾರ್ಗ) ಪ್ರಯಾಣಿಕರು ಮಾರ್ಗ ಬದಲಾಯಿಸಲು ಈ ನಿಲ್ದಾಣವನ್ನು ಬಳಸಬಹುದು.

ಪ್ರಸ್ತುತ ಈ ನಿಲ್ದಾಣ ದಿನವೊಂದಕ್ಕೆ ಸರಾಸರಿ 39,000 ಪ್ರಯಾಣಿಕರನ್ನು ನಿರ್ವಹಣೆ ಮಾಡುತ್ತಿದೆ. ‘ನಮ್ಮ ಮೆಟ್ರೊ’ ಯೋಜನೆಯ ಮೊದಲ ಹಂತದ ಎಲ್ಲಾ ಮಾರ್ಗಗಳಲ್ಲೂ  ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರ ಆರಂಭವಾದ ಬಳಿಕ ಇಲ್ಲಿ ಪ್ರಯಾಣಿಕರ ದಟ್ಟಣೆ  ಮೂರು ಪಟ್ಟು ಹೆಚ್ಚಾಗಲಿದೆ’ ಎಂದು   ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

ಮೆಜೆಸ್ಟಿಕ್‌ನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಕೇಂದ್ರ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವೂ (ನಗರ ರೈಲು  ನಿಲ್ದಾಣ) ಇಲ್ಲಿಂದ  ಕೆಲವೇ ಮೀಟರ್‌ಗಳಷ್ಟು ದೂರದಲ್ಲಿದೆ. ಈ  ನಿಲ್ದಾಣವನ್ನು ಬಳಸುವವರ ಪೈಕಿ ರಾಜಧಾನಿಯಿಂದ  ಬೇರೆ ಊರುಗಳಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚು.

ಮೆಜೆಸ್ಟಿಕ್‌ನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ ನಿಲ್ದಾಣವೂ ಮೆಟ್ರೊ ನಿಲ್ದಾಣದ ಪಕ್ಕದಲ್ಲೇ ಇದೆ.  ಬಿಎಂಟಿಸಿ ಬಸ್‌ ಬಳಸಿ ನಗರದ ಬೇರೆ ಬೇರೆ ಪ್ರದೇಶಗಳಿಗೆ ತಲುಪುವವರೂ ಈ ನಿಲ್ದಾಣವನ್ನು ಬಳಸುತ್ತಾರೆ. ಹಾಗಾಗಿ ಉಳಿದ ಮೆಟ್ರೊ ನಿಲ್ದಾಣಗಳಿಗಿಂತ ಇಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚು ಇರುತ್ತದೆ.

ಈ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಿದೆ. ಈ ದಿನಗಳಿಗಾಗಿ ನಾವು ಕಾತರದಿಂದ ಕಾಯುತ್ತಿದ್ದೆವು. ನಗರಕ್ಕೆ ಪ್ರಮುಖ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಕಾರ್ಯನಿರ್ವಹಿಸಿದ ಹೆಮ್ಮೆ ನಮ್ಮದು’ ಎಂದು ಅಧಿಕಾರಿಗಳು ತಮ್ಮ ಖುಷಿ ಹಂಚಿಕೊಂಡಿದ್ದಾರೆ.