ಸರ್ಕಾರವು ಈಗಾಗಲೇ ಆರೋಗ್ಯ ಭಾಗ್ಯ,ಶಾದಿ ಭಾಗ್ಯ,ಜ್ಯೋತಿ ಭಾಗ್ಯ ಅನ್ನ ಭಾಗ್ಯ ಹೀಗೆ ಹಲವಾರು ಭಾಗ್ಯಗಳನ್ನು ಜನರಿಗೆ ಕೊಟ್ಟಿದೆ.ಈಗ ಇದಕ್ಕೆ ಮತ್ತೊಂದು ಭಾಗ್ಯ ಸೇರ್ಪಡೆಯಾಗಿದೆ.
ಅದುವೇ ಕಾರ್ ಭಾಗ್ಯ.ಇದೇನಪ್ಪಾ ಇದು ಕಾರ್ ಭಾಗ್ಯ ಅಂತೀರಾ..!
ಹೌದು,ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 3500 ಮಂದಿಗೆ ಕಾರು ಖರೀದಿಸಲು 3 ಲಕ್ಷ ರೂ. ವರೆಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ. ಸಾಲ ಸೌಲಭ್ಯ ಒದಗಿಸುವ ಮೂಲಕ ಕಾರು ವಿತರಣೆ ಪ್ರಕ್ರಿಯೆ ಶುರುವಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಈ ವಿಶೇಷ ಯೋಜನೆ ರೂಪಿಸಿದೆ. ರಾಜ್ಯ ಸರ್ಕಾರ ಈ ಯೋಜನೆಗಾಗಿ 105 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿದೆ. ವಾಲ್ಮೀಕಿ, ಬೋವಿ, ದೇವರಾಜ ಅರಸು ಅಭಿವೃದ್ಧಿ ನಿಗಮಗಳ ಮೂಲಕವೂ ಯೋಜನೆ ಜಾರಿಗೆ ತರಲಾಗುತ್ತಿದೆ. ಯೋಜನೆಗೆ ಬೆಂಗಳೂರಿನಲ್ಲಿ ಈಗಾಗಲೇ ಚಾಲನೆ ದೊರೆತಿದ್ದು ಆರಂಭಿಕವಾಗಿ 1000 ಅಭ್ಯರ್ಥಿಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಯೋಜನೆಯಲ್ಲಿ ಏನೆಲ್ಲಾ ಇದೆ..?
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಸುಮಾರು 3500 ಟ್ಯಾಕ್ಸಿ ಕಾರುಗಳ ವಿತರಣೆ ಮಾಡಲಾಗುತ್ತದೆ.ಆಯ್ಕೆಯಾದ ಫಲಾನುಭವಿಗಳಿಗೆ ಒಂದು ಟ್ಯಾಕ್ಸಿಗೆ 3 ಲಕ್ಷ ರೂ.ವರೆಗೆ ಸಬ್ಸಿಡಿ ನೀಡಲಾಗುತ್ತದೆ.
ಸಾಲ ಸಿಗುವುದು ಮತ್ತೆ ಹಿಂದಿರುಗಿಸುವುದು ಹೇಗೆ..?
ಬ್ಯಾಂಕ್ಗಳಿಂದ ಸಾಲ ದೊರೆಯುವಂತೆ ಮಾಡುವುದು, ಓಲಾ ಹಾಗೂ ಊಬರ್ ಕಂಪನಿಗಳ ಜತೆ ಟೈಅಪ್ ಮಾಡಿಕೊಂಡು ಬಿಜಿನೆಸ್ ಕೊಡಿಸುವುದು, ಗಳಿಸಿದ ಆದಾಯದಲ್ಲಿ ಬ್ಯಾಂಕ್ಗಳಿಗೆ ಸಾಲ ಮರುಪಾವತಿಯಾಗುವಂತೆ ನೋಡಿಕೊಳ್ಳುವುದು.
ಕಾರ್ ಭಾಗ್ಯ ಪಡೆಯಲು ಏನೆಲ್ಲಾ ಅರ್ಹತೆ ಇರಬೇಕು..?
- ನಿರುದ್ಯೋಗಿಯಾಗಿರಬೇಕು.ಯಾವುದೇ ಕೆಲಸದಲ್ಲಿರಬಾರದು.
- ಅಭ್ಯರ್ಥಿಯು ಹಳದಿ ಬ್ಯಾಡ್ಜ್ ಹೊಂದಿರಬೇಕು.
- ಕುಟುಂಬದಲ್ಲಿ ಯಾರೊಬ್ಬರು ಸರ್ಕಾರಿ ಕೆಲಸ ಹೊಂದಿರಬಾರದು.
- ಬಿಪಿಎಲ್ ಕಾರ್ಡ್ ಹೊಂದಿರಬೇಕು
- ಒಂದು ವರ್ಷಕ್ಕೆ ಆರ್ಥಿಕವಾಗಿ 12 ಸಾವಿರ ರೂ. ಮೀರಿರಬಾರದು.
- ಅಭ್ಯರ್ಥಿ ಆಯ್ಕೆ ಹೇಗೆ ನಡೆಯುತ್ತೆ..?
- ನಿಮ್ಮ ನಿಮ್ಮ ಜಿಲ್ಲೆಯಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಅರ್ಜಿಗಳನ್ನು ಪಡೆದು ನಿಮ್ಮ ಸ್ವ ವಿವರಗಳನ್ನು ಭರ್ತಿ ಮಾಡಿ ಕೊಡಬೇಕು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ, ಸಂಸದರು ಹಾಗೂ ಶಾಸಕರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ.
ಫಲಾನುಭವಿಯು ಈ ಕಾರಗಳನ್ನು ಮಾತ್ರ ಕೊಳ್ಳಬಹುದು..
ಫಲಾನುಭವಿಯು 6 ರಿಂದ 8 ಲಕ್ಷ ರೂ. ಬೆಲೆಬಾಳುವ ಕಾರುಗಳನ್ನು ಕೊಳ್ಳಬಹುದು.ಫಲಾನುಭವಿಯು ಹುಂಡೈ ಕಂಪನಿಯ ಎಸ್ಸೆಂಟ್ ಕಾರು, ಟೊಯೋಟಾ ಇಟಿಯೋಸ್, ಮಾರುತಿ ಸ್ವಿಫ್ಟ್ ಡಿಸೈರ್ ಅಥವಾ ಹೊಂಡಾ ಅಮೇಝಾನ್ ಕಾರುಗಳನ್ನೇ ಕೊಳ್ಳಬೇಕಾಗುತ್ತದೆ.