ರಾಕೆಟ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ ಮಹತ್ವಾಕಾಂಕ್ಷಿ ಚಂದ್ರಯಾನ-2 ಬಾಹ್ಯಾಕಾಶ ಯೋಜನೆಯನ್ನು ಇಸ್ರೋ ಅನಿರ್ದಿಷ್ಟಾವಧಿಗೆ ಮುಂದೂಡಿದೆ.ಚಂದ್ರಯಾನ-2 ಉಪಕರಣಗಳನ್ನು ಹೊತ್ತ ಬಾಹ್ಯಾಕಾಶ ವಾಹನ ವ್ಯವಸ್ಥೆಯಲ್ಲಿ ಉಡ್ಡಯನಕ್ಕೆ ಒಂದು ತಾಸು ಮೊದಲು ತಾಂತ್ರಿಕ ಸಮಸ್ಯೆಯೊಂದು ಪತ್ತೆಯಾಯಿತು.ಮುಂಜಾಗರೂಕತೆ ಕ್ರಮವಾಗಿ ಚಂದ್ರಯಾನ-2ರ ಉಡ್ಡಯನವನ್ನು ಇಂದು ರದ್ದುಪಡಿಸಲು ನಿರ್ಧರಿಸಲಾಯಿತು.
ಹೊಸ ದಿನಾಂಕಗಳನ್ನು ನಂತರ ಘೋಷಿಸಲಾಗುವುದು ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿತು. ಚಂದಿರನ ಮೇಲೆ ಇಳಿಯಲಿರುವ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯಾನಕ್ಕೆ ವಿಶ್ವವೇ ಕಣ್ಣರಳಿಸಿಕೊಂಡು ಕಾದಿತ್ತು.ಚಂದ್ರಯಾನ-2 ಗಗನನೌಕೆಯನ್ನು ಹೊತ್ತ ಬಾಹುಬಲಿ ಹೆಸರಿನ ಬೃಹತ್ ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ 2.40ರ ನಸುಕಿನಲ್ಲಿ ನಭಕ್ಕೆ ಚಿಮ್ಮಬೇಕಿತ್ತು.ಇದರೊಂದಿಗೆ ಇಸ್ರೋ ಈ ಹಿಂದೆ ಯಾವ ರಾಷ್ಟ್ರವೂ ತಲುಪಲು ಸಾಧ್ಯವಾಗದ ಚಂದಿರನ ಪಾಶ್ರ್ವವೊಂದರಲ್ಲಿ ಮಹತ್ವದ ಸಂಶೋಧನೆ ನಡೆಸಬೇಕಿತ್ತು. 57 ದಿನಗಳ ಭಾರತದ ಈ ಚಂದ್ರಯಾನ-2 ಇಡೀ ವಿಶ್ವದ ಕುತೂಹಲ ಕೆರಳಿಸಿತ್ತು.
ಚಂದ್ರಯಾನ-2 ಗಗನನೌಕೆಯನ್ನು ಹೊತ್ತು ಅಂತರಿಕ್ಷಕ್ಕೆ ಚಿಮ್ಮಲಿರುವ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ 44 ಮೀಟರ್‍ಗಳಷ್ಟು ಎತ್ತರವಿದೆ. ಇದೇ ಕಾರಣಕ್ಕಾಗಿ ಇದನ್ನು ಬಾಹುಬಲಿ ರಾಕೆಟ್ ಎಂದು ಹೆಸರಿಡಲಾಗಿತ್ತು.ಈ ಬಾಹುಬಲಿ 3.8 ಟನ್‍ಗಳ ಚಂದ್ರಯಾನ-2 ನೌಕೆಯನ್ನು ಶಶಾಂಕನತ್ತ ಹೊತ್ತೊಯ್ದು ನಿಗದಿತ ಸ್ಥಳದಲ್ಲಿ ಇಳಿಸಬೇಕಿತ್ತು. 375 ಕೋಟಿ ರೂ.
ವೆಚ್ಚದ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ 15 ನಿಮಿಷಗಳ ಪ್ರಯಾಣದ ನಂತರ 603 ಕೋಟಿ ರೂ. ವೆಚ್ಚದ ಚಂದ್ರಯಾನ-2 ಗಗನೌಕೆಯನ್ನು ಚಂದ್ರನ ಮೇಲೆ ಇಳಿಸುವ ಯೋಜನೆಯಾಗಿತ್ತು.ಈ ಹಿಂದೆ ಚಂದ್ರಯಾನ-1 ಮತ್ತು ಮಂಗಳಯಾನ ಉಪಗ್ರಹವನ್ನು ಜಿಎಸ್‍ಎಲ್‍ವಿ ಶ್ರೇಣಿಯ ರಾಕೆಟ್‍ನಿಂದ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿತ್ತು.ಇಸ್ರೋ ಅಂತರಿಕ್ಷ ಯಾನ ಮತ್ತು ಪ್ರಯೋಗದಲ್ಲಿ ವಿಶ್ವದಲ್ಲೇ ಅತ್ಯಂತ ಮುಂಚೂಣಿ ಸ್ಥಾನದಲ್ಲಿದ್ದು, ಅನೇಕ ದಾಖಲೆಗಳಿಗೆ ಪಾತ್ರವಾಗಿದೆ.