ಸುದ್ದಿ

ಕುಷ್ಠ ರೋಗಿಯ ಅನ್ನ, ಪಿಂಚಣಿ ಕಿತ್ತುಕೊಂಡ ಆಧಾರ್..! ಓದಿ ಈ ಮನಕಲುಕುವ ಸ್ಟೋರಿ…

By admin

February 17, 2018

ಆಧಾರ್ ಕಾರ್ಡ್ ಎಂಬ ಸಾರ್ವತ್ರಿಕ ಗುರುತಿನ ಚೀಟಿ, ಒಂದೆಡೆ ಅಕ್ರಮ ನುಸುಳುಕೋರರನ್ನು ತಡೆಗಟ್ಟಲು, ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಸಹಕಾರಿಯಾಗುತ್ತಿರುವ ಹೊತ್ತಲ್ಲೇ, ಇನ್ನೊಂದೆಡೆ ಹಲವು ಬಡವರ ಪಾಲಿಗೆ ಆಧಾರ್ ಕಾರ್ಡ್ ಒಂದು ಶಾಪವಾಗಿ ಪರಿಣಮಿಸಿದೆ! ಕುಷ್ಟರೋಗದ ಕಾರಣ ಕಣ್ಣಿನ ದೃಷ್ಟಿ ಹಾಗೂ ಬೆರಳುಗಳನ್ನು ಕಳೆದುಕೊಂಡಿರುವುದರಿಂದ ಆಧಾರ್ ಕಾರ್ಡ್ ಪಡೆಯಲು ಸಾಧ್ಯವಾಗುತ್ತಿಲ್ಲ.

ಈ ರೀತಿಯ ಪ್ರಕರಣಗಳಿಗೆ ಪರಿಹಾರ ಎಲ್ಲಿದೆ..?

ಮಾಗಡಿ ರಸ್ತೆಯಲ್ಲಿ ವಾಸಿಸುತ್ತಿರುವ 65 ವರ್ಷದ  ಸಾಜಿದಾ ಬೇಗಂ ಅಡ್ಡಿ ಆತಂಕಗಳಿಲ್ಲದೆ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಏಕೆಂದರೆ, ಅವರ ಬಳಿ ಎಲ್ಲ ಕೆಲಸ ಕಾರ್ಯಗಳಿಗೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ಇಲ್ಲ!ಕುಷ್ಟರೋಗ ದಿಂದ ತಮ್ಮ ಕೈಬೆರಳುಗಳನ್ನೂ, ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡ ಅವರಿಗೆ ಬೆರಳಚ್ಚು ನೀಡುವುದಕ್ಕೆ, ಕಣ್ಣಿನ ರೆಟಿನಾ ಅಚ್ಚು ನೀಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಆಧಾರ್ ಕಾರ್ಡ್ ಇಲ್ಲ!

ಪಿಂಚಣಿಯೂ ನಿಂತು ಬಿಟ್ಟಿದೆ…

ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ಅವರಿಗೆ ಪ್ರತಿ ತಿಂಗಳು ಬರುತ್ತಿದ್ದ 1೦೦೦ ರೂ. ಪಿಂಚಣಿಯೂ ನಿಂತು ಬಿಟ್ಟಿದೆ! ಕೈ ಬೆರಳು ಇಲ್ಲದವರು, ಕುಷ್ಟ ರೋಗಿಗಳು ಆಧಾರ್ ಕಾರ್ಡ್ ಮಾಡಿಸುವುದು ಹೇಗೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.

ಈ ಕುರಿತು ಮಾತನಾಡಿದ ಮಾಗಡಿ ರಸ್ತೆಯಲ್ಲಿರುವ ಕುಷ್ಟ ರೋಗಿಗಳ ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಡಾ.ಅಯುಬ್ ಅಲಿ ಜೈ, 1೦೦ ಹಾಸಿಗೆಯ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 57 ಜನರಲ್ಲಿ 1೦ ಜನರ ಬಳಿ ಆಧಾರ್ ಕಾರ್ಡ್ ಇಲ್ಲ. ರೋಗಿಗಳು ಹೇಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟನೆ ಇಲ್ಲ ಎಂದಿದ್ದಾರೆ.

ಸಾಜಿದಾ ಬೇಗಂರಂತೆಯೇ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೊಬ್ಬ ಕುಷ್ಟ ರೋಗಿ ಆಧಾರ್ ಕಾರ್ಡ್ ಮಾಡಿಸುವುದಕ್ಕಾಗಿ ಬಹಳಷ್ಟು ಬಾರಿ ಬೆಂಗಳೂರು ಒನ್ ಕೇಂದ್ರಕ್ಕೆ ಅಲೆದಿದ್ದಾರೆ. ಅಲ್ಲಿನ ಸಿಬ್ಬಂದಿಗಳು, ನಿಮಗೆ ಆಧಾರ್ ಕಾರ್ಡ್ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ವಾಪಸ್ ಕಳಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿದ UIDAI (Unique Identification Authority of India ಮೊದಲು ಅವರು ಎನ್ ರೋಲ್ ಮಾಡಿಸಿಕೊಳ್ಳಬೇಕು. ಅಕಸ್ಮಾತ್ ಏನಾದರೂ ದೋಷವಿದ್ದರೆ ಅದಕ್ಕೂ ಒಂದು ಪತ್ರ ಬರುತ್ತದೆ ಎಂದಿದೆ. ಆದರೂ ಆಧಾರ್ ಕಾರ್ಡ್‌ಗೆ ಅತ್ಯಗತ್ಯವಾದ ಬೆರಳಚ್ಚು ನೀಡುವುದಕ್ಕೆ ಸಾಧ್ಯವಿಲ್ಲದವರು ಏನು ಮಾಡಬೇಕೆಂಬ ಬಗ್ಗೆ ಸ್ಪಷ್ಟನೆ ಇಲ್ಲ .

 

ಆಧಾರ್ ನೋಂದಣಿಗೆ ತೊಡಕುಂಟಾಗಿ ಪಿಂಚಣಿ ವಂಚಿತರಾಗಿದ್ದ ಕುಷ್ಟರೋಗ ಎದುರಿಸುತ್ತಿರುವ ಸಜೀದಾ ಬೇಗಂ (65) ಅವರಿಗೆ ಹಲವರು ನೆರವಿನ ಹಸ್ತ ಚಾಚಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದಿರುವ ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ಯುಐಡಿಎಐ ಈ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಾಷ್ಟ್ರೀಯ ಹೆಲ್ತ್ ಮಿಷನ್ ನ ನಿರ್ದೇಶಕ ರಥನ್ ಕೇಲ್ಕರ್, ಈ ವಿಷಯವನ್ನು ಸೆಂಟರ್ ಫಾರ್ ಇ-ಕಾಮರ್ಸ್ ನ ಗಮನಕ್ಕೆ ತಂದಿದ್ದೇನೆ, ಇದೇ ಮಾದರಿಯ ಪ್ರಕರಣಗಳು ಚಾಮರಾಜನಗರದಲ್ಲಿಯೂ ಕಂಡುಬಂದಿದೆ. ಈ ರೀತಿಯ ಪ್ರಕರಣಗಳಿಗೆ ಪರಿಹಾರ ಇನ್ನಷ್ಟೇ ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಒಂದೆಡೆ ಸರ್ಕಾರಿ ಸಂಸ್ಥೆಗಳು ಸಜೀದಾ ಬೇಗಂ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದ್ದರೆ, ಮತ್ತೊಂದೆಡೆ ನೆಟಿಜನ್ ಗಳೂ ಸಹ ನೆರವಿಗೆ ಧಾವಿಸುತ್ತಿದ್ದಾರೆ. ಸಜೀದಾ ಬೇಗಂ ಕುರಿತ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನವದೆಹಲಿಯ ಡೀ ಶರ್ಮಾ, ನೇಹಾ ಬಾರ್ವೆ ವ್ಯಾಸ್, ಬಜಾಜ್ ಕ್ಯಾಪಿಟಲ್ ಲಿಮಿಟೆಡ್ ನ ಹಿರಿಯ ಫೈನಾನ್ಶಿಯಲ್ ಅಡ್ವೈಸರ್ ಆದ ಫಲಕ್ ರಬ್ನವಾಜ್, ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರು ಸಜೀದಾ ಬೇಗಂ ಗೆ ನೆರವು ನೀಡಲು ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ.